ಗಂಗೊಳ್ಳಿ ಬಂದರು ಕುಸಿತ: ಸಿಪಿಎಂ ನಿಯೋಗ ಭೇಟಿ
ಗಂಗೊಳ್ಳಿ, ಫೆ.16: ಗಂಗೊಳ್ಳಿ ಮೀನುಗಾರಿಕಾ ಬಂದರು ಜೆಟ್ಟಿ ಕುಸಿದಿರುವ ಹಿನ್ನಲೆಯಲ್ಲಿ ಇಂದು ಸಿಪಿಎಂ ಪಕ್ಷದ ನಿಯೋಗವೊಂದು ಬಂದರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಬಂದರಿನ ಜೆಟ್ಟಿಯ ಒಂದೊಂದೆ ಪ್ಲ್ಯಾಟ್ಫಾರ್ಮಗಳು ಕುಸಿಯುತ್ತಿರುವುದು ಮೀನುಗಾರರಿಗೆ ಆತಂಕ ಹುಟ್ಟಿಸಿದೆ. ಇದಕ್ಕೆ ಹೊಂದಿಕೊಂಡಿರುವ ಹಳೆ ಜೆಟ್ಟಿಯೂ ಅಭಿವೃದ್ಧಿ ಕಾಣದಿರುವುದು ಜನಪ್ರತಿನಿಧಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. 3 ಕೋಟಿ ರೂ. ವೆಚ್ಚದ ದುರಸ್ತಿ ಕಾಮಗಾರಿ ಕಳಪೆಯಾಗಿರುವ ಶಂಕೆಯಿದೆ. ಇಲಾಖೆಯ ಬೇಜವಾಬ್ದಾರಿಯಿಂದ ಹೂಳೆತ್ತುವ ಕೆಲಸಗಳು ನಡೆ ಯದಿರುವುದನ್ನು ಸಿಪಿಎಂ ಖಂಡಿಸಿತು.
ಸಾವಿರಾರು ಜನರಿಗೆ ಅನ್ನ ನೀಡುತ್ತಿರುವ ಮೀನುಗಾರಿಕೆ ಕೇಂದ್ರವನ್ನು ನಿರ್ಲಕ್ಷ ಮಾಡಿದರೆ ಅಲ್ಲಿನ ಕಾರ್ಮಿಕರನ್ನು ಒಗ್ಗೂಡಿಸಿ ಪ್ರತಿಭಟನೆ ಹಮ್ಮಿಕೊಳ್ಳ ಲಾಗುವುದೆಂದು ಸಿಪಿಎಂ ಎಚ್ಚರಿಕೆ ನೀಡಿದೆ. ಜೆಟ್ಟಿಯ ಸಮೀಪದ ಜನವಸತಿ ಪ್ರದೇಶದಲ್ಲಿ ಡಂಪಿಂಗ್ ಯಾರ್ಡ್ ಮಾಡಲು ಹೊರಟ ಕ್ರಮವನ್ನು ಸಿಪಿಎಂ ವಿರೋಧಿಸಿದೆ.
ನಿಯೋಗದಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಕಟ್ಟಡ ಕಾರ್ಮಿಕ ಸಂಘದ ಮುಖಂಡರಾದ ಅರುಣ್ ಕುಮಾರ್ ಗಂಗೊಳ್ಳಿ ಉಪಸ್ಥಿತರಿದ್ದರು.