ವಿದೇಶಿ ಕರೆನ್ಸಿಗಳ ಅಕ್ರಮ ಸಾಗಾಟ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಓರ್ವನ ಬಂಧನ
ಮಂಗಳೂರು, ಫೆ. 16: ವಿದೇಶಿ ಕರೆನ್ಸಿಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಿಯೋರ್ವನನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಬಂಧಿತನಿಂದ 25,82,686 ರೂ. ಮೌಲ್ಯದ ವಿದೇಶಿ ಕರೆನ್ಸಿ ವಶಪಡಿಸಿಕೊಳ್ಳಲಾಗಿದೆ. ಮೂಲತಃ ಕಾಸರಗೋಡಿನ, ಪ್ರಸ್ತುತ ಮಂಗಳೂರು ನಿವಾಸಿ ಸಿರಾಜುದ್ದೀನ್ ಪಳ್ಳಿಕೆ ಕುಂಞಾಲಿ (39) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಮಂಗಳೂರು ವಿಮಾನ ನಿಲ್ದಾಣದಿಂದ ಗುರುವಾರ ಏರ್ ಇಂಡಿಯಾ ವಿಮಾನದಲ್ಲಿ ದುಬೈಗೆ ಪ್ರಯಾಣ ಬೆಳೆಸಲು ಆಗಮಿಸಿದ್ದ ಸಿರಾಜುದ್ದೀನ್‌ನನ್ನು ಅಧಿಕಾರಿಗಳು ತಪಾಸಣೆಗೊಳಪಡಿಸಿದ್ದಾರೆ. ಈ ಸಂದರ್ಭ ಆತನ ಸಾಕ್ಸ್‌ನಲ್ಲಿ ವಿದೇಶದ ಕೆಲವು ಕರೆನ್ಸಿಗಳು ಪತ್ತೆಯಾಗಿವೆ. ಮತ್ತಷ್ಟು ತಪಾಸಣೆ ನಡೆಸಿದಾಗ ಆತನಲ್ಲಿದ್ದ ಬ್ಯಾಗ್‌ನ ಅಡಿ ಭಾಗದಲ್ಲಿ ಸುರುಳಿಯಂತೆ ಸುತ್ತಿದ್ದ ದಾಖಲೆ ಇಲ್ಲದ ವಿದೇಶಿ ಕರೆನ್ಸಿ ಪತ್ತೆಯಾಗಿದೆ ಎಂದು ಎಂದು ಡಿಆರ್‌ಐ ಉಪನಿರ್ದೇಶಕ ವಿನಾಯಕ ಭಟ್ ತಿಳಿಸಿದ್ದಾರೆ.
ಯು.ಎಸ್. ಡಾಲರ್ಸ್, ಕುವೈಟ್‌ನ ದೀನಾರ್ ಸಹಿತ ಸ್ವಿಝರ್ಲ್ಯಾಂಡ್ , ಪ್ರಾನ್ಸ್, ಯೂರೋಪ್ ದೇಶಗಳ ಕರೆನ್ಸಿಗಳು ಪತ್ತೆಯಾಗಿವೆ. ಆತನ ವಿರುದ್ಧ ಕಸ್ಟಮ್ಸ್ ಕಾಯ್ದೆಯಡಿ ಆರ್‌ಬಿಐ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.