ಕಾರ್ಕಳ ದಲಿತ ಯುವತಿಯ ಅತ್ಯಾಚಾರ: ಅಪರಾಧಿಗೆ ಜೀವಾವಧಿ ಶಿಕ್ಷೆ
ಉಡುಪಿ, ಫೆ.16: ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರುವರೆ ವರ್ಷಗಳ ಹಿಂದೆ ನಡೆದ ಪರಿಶಿಷ್ಟ ಜಾತಿಯ ಯುವತಿ ಮೇಲಿನ ಅತ್ಯಾಚಾರ ಪ್ರಕರಣದ ಅಪರಾಧಿಗೆ ಉಡುಪಿ ಜಿಲ್ಲಾ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಇಂದು ಆದೇಶ ನೀಡಿದೆ.
ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮದ ಕೈರಬೆಟ್ಟು ನಿವಾಸಿ ಪ್ರದೀಪ್ ಪೂಜಾರಿ (32) ಶಿಕ್ಷೆಗೆ ಗುರಿಯಾದ ಅಪರಾಧಿ. ಮುಂಬೈಯ ಹೊಟೇಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಆತ 2014ರ ಸೆ.10ರಂದು ಸಂಜೆ 5:55ರ ಸುಮಾರಿಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 18 ವರ್ಷ ವಯಸ್ಸಿನ ದಲಿತ ಯುವತಿಯನ್ನು ಬೈಕಿನಲ್ಲಿ ಹಿಂಬಾಲಿಸಿಕೊಂಡು ಬಂದು ಗದ್ದೆ ಬದಿಯ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಎಸಗಿ ಕೊಲೆ ಬೆದರಿಕೆಯೊಡ್ಡಿದ್ದನೆಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರದೀಪ್ ಪೂಜಾರಿಯನ್ನು ಮರುದಿನ ಸೆ.11ರಂದು ಬಂಧಿಸಿದ ಕಾರ್ಕಳ ಪೊಲೀಸರು, ಆತನ ವಿರುದ್ಧ ಕಲಂ 376, 323, 506 ಐಪಿಸಿ ಕಲಂ 3(1),(12), ಎಸ್‌ಸಿ/ಎಸ್‌ಟಿ(ಪಿಒಎ) ಕಾಯಿದೆ ಪ್ರಕಾರ ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಆಗಿನ ಕಾರ್ಕಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಅಣ್ಣಾಮಲೈ 2014ರ ಡಿ.5ರಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯಿದೆಯ ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು.
ಪ್ರಕರಣದ ಒಟ್ಟು 29 ಸಾಕ್ಷಿಗಳ ಪೈಕಿ 20 ಸಾಕ್ಷಿಗಳ ವಿಚಾರಣೆ ನಡೆಸಿದ ಜಿಲ್ಲಾ ವಿಶೇಷ ನ್ಯಾಯಾಧೀಶ ಟಿ. ವೆಂಕಟೇಶ ನಾಯ್ಕಾ, ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯ ಪಟ್ಟು, ಅಪರಾಧಿಗೆ ಜೀವಿತ ಅವಧಿಯವರೆಗೆ ಜೈಲಿನಲ್ಲಿರುವ ಶಿಕ್ಷೆ ಮತ್ತು ದಂಡ ವಿಧಿಸಿ, ಸಂತ್ರಸ್ತೆಗೆ 25 ಸಾವಿರ ರೂ. ಪರಿಹಾರ ಮೊತ್ತ ನೀಡುವಂತೆ ಆದೇಶ ನೀಡಿದರು.
ಸರಕಾರದ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕಿ ಶಾಂತಿ ಬಾಯಿ ವಾದಿಸಿದ್ದರು. ಬಳಿಕ ಅಪರಾಧಿಯನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರವಾರ ಕಾರಾಗೃಹಕ್ಕೆ ಕರೆದುಕೊಂಡು ಹೋಗಲಾಯಿತು. ಆತ ಬಂಧಿತ ದಿನದಿಂದ ಈವರೆಗೆ ನ್ಯಾಯಾಂಗ ಬಂಧನದಲ್ಲಿದ್ದನು.
ಅದೇ ದಿನ ಇನ್ನೊಬ್ಬಳ ಮಾನಭಂಗಕ್ಕೆ ಯತ್ನ !
ಜೀವಾವಧಿ ಶಿಕ್ಷೆಗೆ ಗುರಿಯಾದ ಪ್ರದೀಪ್ ಪೂಜಾರಿ ಅದೇ ದಿನ ಮತ್ತೊಬ್ಬ ಬಾಲಕಿಯ ಮಾನಭಂಗಕ್ಕೂ ಯತ್ನಿಸಿದ್ದನು. ಈ ಬಗ್ಗೆ ಆತನ ವಿರುದ್ಧ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಾಗಿದ್ದು, ಇದೀಗ ವಿಚಾರಣೆ ನಡೆಯುತ್ತಿದೆ.
ದಲಿತ ಯುವತಿಯ ಅತ್ಯಾಚಾರ ನಡೆಸುವ ಕೆಲವು ನಿಮಿಷಗಳ ಮೊದಲು ಪ್ರದೀಪ್ ಪೂಜಾರಿ ಅದೇ ದಾರಿಯಲ್ಲಿ ಶಾಲೆ ಬಿಟ್ಟು ಮನೆಗೆ ಹೋಗುತ್ತಿದ್ದ 17 ವರ್ಷ ವಯಸ್ಸಿನ ಬಾಲಕಿಯನ್ನು ತಡೆದು ನಿಲ್ಲಿಸಿ ಪ್ರೀತಿಸುವುದಾಗಿ ಹೇಳಿಕೊಂಡಿದ್ದನು. ಇದನ್ನು ನಿರಾಕರಿಸಿದ ಬಾಲಕಿಯ ಕೆನ್ನೆಗೆ ಬಾರಿಸಿದ ಆತ ಆಕೆಯ ಮಾನಭಂಗಕ್ಕೆ ಯತ್ನಿಸಿದ್ದನು. ಈ ವೇಳೆ ಆಕೆ ಆತನಿಂದ ತಪ್ಪಿಸಿ ಓಡಿ ಹೋಗಿದ್ದಳು.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ವಿಚಾರಣೆ ನಿಗದಿ ಪಡಿಸುವ ದಿನಾಂಕವನ್ನು ಮಾ. 29ಕ್ಕೆ ಮುಂದೂಡಿದೆ. ಸರಕಾರದ ಪರ ವಿಶೇಷ ಅಭಿಯೋಜಕ ವಿಜಯ ಪೂಜಾರಿ ವಾದಿಸುತ್ತಿದ್ದಾರೆ.