×
Ad

ಫೆ.18ರಂದು ದಲಿತ ಹಕ್ಕುಗಳ ನಗರ ಸಮಾವೇಶ: ಗೋಪಾಲಕೃಷ್ಣ ಅರಳಹಳ್ಳಿ ಉದ್ಘಾಟನೆ

Update: 2018-02-16 23:18 IST

ಮಂಗಳೂರು, ಫೆ. 16: ಮಂಗಳೂರು ನಗರ ಮಟ್ಟದ ದಲಿತ ಹಕ್ಕುಗಳ ನಗರ ಸಮಾವೇಶವು ಫೆ. 18ರಂದು ಬೆಳಗ್ಗೆ 10:30ಕ್ಕೆ ಮಂಗಳೂರು ಮಿನಿವಿಧಾನ ಸೌಧದ ಬಳಿ ಇರುವ ರಾಜ್ಯ ಸರಕಾರಿ ನೌಕರರ ಸಭಾಭವನದಲ್ಲಿ ನಡೆಯಲಿದೆ. ಇದರ ಉದ್ಘಾಟನೆಯನ್ನು ಸಂಘಟನೆಯ ರಾಜ್ಯ ಸಮಿತಿ ಸಂಚಾಲಕ ಗೋಪಾಲಕೃಷ್ಣ ಅರಳಹಳ್ಳಿ ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಪ್ರಾಂತ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ. ಯಾದವ ಶೆಟ್ಟಿ ಅವರು ಭಾಗವಹಿಸಲಿದ್ದಾರೆ. ಅತಿಥಿಗಳಾಗಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ತಿಮ್ಮಯ್ಯ ಕೊಂಚಾಡಿ ಮತ್ತು ಕಾರ್ಯದರ್ಶಿ ಗಿರಿಜಾ ಮೂಡಬಿದ್ರಿ ಅವರು ಭಾಗವಹಿಸಲಿದ್ದಾರೆ.

ಸಮಾವೇಶದ ಅಧ್ಯಕ್ಷತೆಯನ್ನು ನಗರ ಸಮಿತಿ ಅಧ್ಯಕ್ಷ ಲಿಂಗಪ್ಪ ನಂತೂರು ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ದಲಿತ ಮೀಸಲು ನಿಧಿಯ ಸೌಲಭ್ಯಗಳಲ್ಲಿ ತೀವ್ರ ಕಡಿತ ಮಾಡಿದ್ದು ದಲಿತರ ಪಾಲಿಗೆ ಅನ್ಯಾಯವೆಸಗಿದೆ. ಮನೆನಿರ್ಮಾಣ ಸಹಾಯಧನದ ಮೊತ್ತವನ್ನು ಚುನಾವಣಾ ಭರವಸೆಗೆ ವ್ಯತಿರಿಕ್ತವಾಗಿ ಕಡಿತ ಮಾಡಿದೆ. ಇತ್ತೀಚೆಗೆ ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ ಮನೆ ನಿವೇಶನ ಹಂಚಿಕೆಯ ಪ್ರಕ್ರಿಯೆಯಲ್ಲಿ ದಲಿತ ಫಲಾನುಭವಿಗಳ ಆಯ್ಕೆಯಲ್ಲಿ ಸಂವಿಧಾನಬದ್ಧ ಪ್ರಮಾಣದ ರೀತಿಯಲ್ಲಿ ಮಾಡದೆ ತೀವ್ರ ಅನ್ಯಾಯವೆಸಗಿದೆ. ಅರ್ಹ ಬಡ ಫಲಾನುಭವಿಗಳಿಗೆ ಇದರಿಂದ ಅನ್ಯಾಯವಾಗಿದೆ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಸಮಾವೇಶದಲ್ಲಿ ಚರ್ಚೆ ನಡೆದು ಹೋರಾಟವನ್ನು ರೂಪಿಸಲು ತೀರ್ಮಾನಿಸಲಾಗುವುದು ಎಂದು ನಗರ ಸಮಿತಿ ಕಾರ್ಯದರ್ಶಿ ಪ್ರಶಾಂತ್ ಎಂ. ಬಿ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News