×
Ad

ಫೆ. 24ರಂದು ಪುಣಚದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳ

Update: 2018-02-17 18:07 IST

ಬಂಟ್ವಾಳ, ಫೆ. 17: ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಫೆ. 24ರಂದು 18ನೆ ಕನ್ನಡ ಸಾಹಿತ್ಯ ಸಮ್ಮೇಳನ ಪುಣಚ ಶ್ರೀದೇವಿ ಭವನದಲ್ಲಿ ನಡೆಯಲಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಕೆ. ಮೋಹನ್ ರಾವ್ ಹೇಳಿದ್ದಾರೆ.

ಶನಿವಾರ ವಿಟ್ಲ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ. ಟಿ.ಆರ್ ಶರ್ಮಾ ದೇರಣಮೂಲೆ ವೇದಿಕೆಯಲ್ಲಿ, ಹಿರಿಯ ವಿದ್ವಾಂಸ, ಸಂಶೋಧಕರಾದ ಡಾ. ಪಾದೆಕಲ್ಲು ವಿಷ್ಣು ಭಟ್ ಅವರ ಅಧ್ಯಕ್ಷತೆಯಲ್ಲಿ ಈ ಸಮ್ಮೇಳನ ನಡೆಯಲಿದೆ. ಅಂದು ಬೆಳಗ್ಗೆ 8.30ಕ್ಕೆ ಕನ್ನಡ ಭುವನೇಶ್ವರಿಯ ಭವ್ಯ ಮೆರವಣಿಗೆಯು ಪುಣಚ ಪೇಟೆಯಿಂದ ಸಭಾಂಗಣದವರೆಗೆ ಮೆರವಣಿಗೆ ನಡೆಯಲಿದ್ದು, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಆರ್.ರಂಗಮೂರ್ತಿ ಮೆರವಣಿಗೆ ಉದ್ಘಾಟಿಸುವರು. ಜಿಪಂ ಸದಸ್ಯೆ ಜಯಶ್ರೀ ಕೋಡಂದೂರು ರಾಷ್ಟ್ರಧ್ವಜ, ತಾಪಂ ಸದಸ್ಯೆ ಕವಿತಾ ಎಸ್. ನಾಯಕ್ ಪರಿಷತ್‌ ಧ್ವಜ, ಗ್ರಾಪಂ ಅಧ್ಯಕ್ಷೆ ಪ್ರತಿಭಾ ಕನ್ನಡ ಧ್ವಜಾರೋಹಣ ಮಾಡುವರು ಎಂದು ಮಾಹಿತಿ ನೀಡಿದರು.

ವಿಟ್ಲ ಅರಮನೆ ಅರಸ ಜನಾರ್ದನ ವರ್ಮಾ ವಸ್ತು ಪ್ರದರ್ಶನ, ಉದ್ಯಮಿ ಮೂಡಂಬೈಲು ರವಿ ಶೆಟ್ಟಿ ಪುಸ್ತಕ ಪ್ರದರ್ಶನ ಉದ್ಘಾಟನೆ ಮಾಡುವರು. ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಆರ್. ರವಿಕಾಂತೇ ಗೌಡ ಸಮ್ಮೇಳನವನ್ನು ಉದ್ಘಾಟಿಸುವರು. ಶಾಸಕಿ ಶಕುಂತಳಾ ಶೆಟ್ಟಿ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಜಿಪಂ ಸದಸ್ಯ ಎಂ.ಎಸ್.ಮುಹಮ್ಮದ್, ಸಾಹಿತಿ ಏರ್ಯ ಲಕ್ಷ್ಮಿ ನಾರಾಯಣ ಆಳ್ವ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.

ಅಲ್ಲದೆ ಸಾಹಿತ್ಯಕ್ಕೆ ಸಂಬಂಧಿಸಿ 'ಒಂದು ಚಿಂತನೆ', 'ನುಡಿ ನಮನ', 'ಸಾಹಿತ್ಯ ಪ್ರಸ್ತುತಿ', 'ಗಮಕ', 'ಚಲನಚಿತ್ರ ಸಾಹಿತ್ಯ', ಸಾಧಕರಿಗೆ ಸನ್ಮಾನ ಹಾಗೂ ಸಮಾರೋಪ ಸಮಾರಂಭ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಐವನ್ ಡಿಸೋಜ, ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್ ಮತ್ತಿತರರು ಭಾಗವಹಿಸುವರು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಮ್ಮೇಳನ ಕಾರ್ಯಾಧ್ಯಕ್ಷ ಎಂ.ಎಸ್. ಮುಹಮ್ಮದ್, ಸ್ವಾಗತ ಸಮಿತಿಯ ಎಚ್. ಬಾಲಕೃಷ್ಣ, ಶ್ರೀಧರ್ ಶೆಟ್ಟಿ, ಗಂಗಾಧರ ಭಟ್ ಕೊಳಕೆ, ಜಯಂತ ನಾಯಕ್, ಜಯಾನಂದ ಪೆರಾಜೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News