ಸಾಗರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ: ಸಚಿವ ಪ್ರಮೋದ್

Update: 2018-02-17 13:53 GMT

ಉಡುಪಿ, ಫೆ.17: ಇಂದು ಹೆಚ್ಚುತ್ತಿರುವ ಮಾಲಿನ್ಯದ ಬಿಸಿ ಸಮುದ್ರವನ್ನು ಕಲುಷಿತಗೊಳಿಸಿದೆ. ಇದರಿಂದ ಜೀವಜಾಲದ ಮೇಲೆ ಆಗುವ ಪರಿಣಾಮ ಗಳನ್ನು ಗಮನಿಸಿ ಸಮುದ್ರಕ್ಕೆ ಸೇರುವ ತ್ಯಾಜ್ಯಗಳನ್ನು ತಡೆಯುವ ಕಾರ್ಯ ಮಾಡಬೇಕು ಎಂದು ರಾಜ್ಯ ಮೀನುಗಾರಿಕೆ, ಯುವಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಉಡುಪಿ ಜಿಲ್ಲೆಯ ಪದವಿ ಕಾಲೇಜುಗಳ ಎನ್‌ಎಸ್‌ಎಸ್, ಎನ್‌ಸಿಸಿ, ಇಕೋ ಕ್ಲಬ್, ರೆಡ್‌ಕ್ರಾಸ್, ಸ್ಕೌಟ್ಸ್ ಅಂಡ್ ಗೈಡ್ಸ್, ಬೋಧಕ ಸಂಚಾಲಕರು ಗಳಿಗೆ ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಶನಿವಾರ ಏರ್ಪಡಿಸ ಲಾದ ಪರಿಸರ ಮನನ ಕಾರ್ಯಕ್ರಮ ಹಾಗೂ ಉಡುಪಿ ಕಡಲತೀರ ಸ್ವಚ್ಛತೆ ಪೂರ್ವಭಾವಿ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮುದ್ರವನ್ನು ಸಂರಕ್ಷಿಸುವ ಹೊಣೆ ಸಮುದ್ರದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿರುವ ಕರಾವಳಿಗರ ಮೇಲಿದೆ. ಶೇ.70ರಷ್ಟು ನೀರಿನಿಂದ ಆವೃತವಾಗಿರುವ ಭೂಮಿಯಲ್ಲಿರುವ ಕಡಲ ಕಿನಾರೆಯ ಸ್ವಚ್ಚತೆಯನ್ನು ಕಾಪಾಡ ಬೇಕಾಗಿದೆ. ಪ್ಲಾಸ್ಟಿಕ್ ಬಳಕೆ ಜೊತೆಗೆ ಭೂಮಿಯ ಮೇಲೆ ಉತ್ಪನ್ನವಾಗುವ ಹೆಚ್ಚಿನ ತ್ಯಾಜ್ಯಗಳು ಸಮುದ್ರದ ಒಡಲನ್ನು ಸೇರುತ್ತಿವೆ. ತ್ಯಾಜ್ಯಗಳ ಗಮ್ಯಸ್ಥಾನ ಕಡಲಾಗಿದೆ ಎಂಬುದನ್ನು ಸೂಕ್ಷ್ಮ ಪರಿಸರ ಅವಲೋಕನದಿಂದ ತಿಳಿದುಬರು ತ್ತದೆ ಎಂದು ಅವರು ಹೇಳಿದರು.

ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಾಲಕೃಷ್ಣ ಎಸ್.ಹೆಗ್ಡೆ ಮಾತನಾಡಿ, ಪರಿಸರ ನಾಶದಿಂದ ಇಡೀ ಜೀವ ಸಂಕುಲ ನಶಿಸುತ್ತಿದೆ. ಪ್ರತೀ ವರ್ಷ ಒಂದು ಲಕ್ಷ ಸಮುದ್ರ ಜೀವ ಸಂಪತ್ತು ನಾಶ ಹೊಂದುತ್ತಿದ್ದು, ಕಳೆದ ವರ್ಷ ಶೇ.23ರಷ್ಟು ಜೀವ ಸಂಪತ್ತು ನಾಶ ಹೊಂದಿದೆ. ಆದುದರಿಂದ ಪರಿಸರದ ಉಳಿವು ಬಹುಮುಖ್ಯ ಎಂದರು.

ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿಯ ಉಡುಪಿ ಪರಿಸರ ಅಧಿಕಾರಿ ಡಾ.ಲಕ್ಷ್ಮೀಕಾಂತ್ ಮಾತನಾಡಿ, ಪರಿಸರಕ್ಕೆ ಹಾನಿ ಮಾಡುತ್ತಿರುವ ಪ್ಲಾಸ್ಟಿಕ್‌ನ ಬಳಕೆ ಕಡಿಮೆ ಮಾಡಬೇಕು. ಪ್ಲಾಸ್ಟಿಕ್ ಕೈಚೀಲಗಳನ್ನು ಸಂಪೂರ್ಣವಾಗಿ ನಿಷೇಧಿಸಿದಾಗ ಮಾತ್ರ ಜೀವರಾಶಿ ಹಾಗೂ ಪರಿಸರ ಉಳಿವು ಸಾಧ್ಯ. ಸಮುದ್ರವು ಕರಾವಳಿ ಜನತೆಯ ಸಂಪದ್ಭರಿತ ಆಸ್ತಿ ಆಗಿದ್ದು, ಸ್ವಾಸ್ತ್ಯ ಸಮಾಜಕ್ಕೆ ಮಾಹಿತಿ ಹಾಗೂ ಜಾಗೃತಿ ಕಾರ್ಯಕ್ರಮ ಬಹಳ ಮುಖ್ಯ ಎಂದು ತಿಳಿಸಿದರು.

ಪರಿಸರ, ನಿಸರ್ಗ ಸಂರಕ್ಷಣಾ ಸಂಸ್ಥೆಯ ಕಾರ್ಯದರ್ಶಿ ಈಶ್ವರ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಜ್ಜರಕಾಡು ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ಉಪಸ್ಥಿತರಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಶನ್‌ಕುಮಾರ್ ಶೆಟ್ಟಿ ಸ್ವಾಗತಿಸಿದರು. ರಾಮರಾಯ ಆಚಾರ್ಯ ವಂದಿಸಿದರು. ಕಾಲೇಜಿನ ಪ್ರಾಧ್ಯಾ ಪಕ ಪ್ರಕಾಶ್ ಕ್ರಮಧಾರಿ ಕಾರ್ಯಕ್ರಮ ನಿರೂಪಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News