ಸಮಾಜದೊಳಗೆ ನಂಬಿಕೆ, ಸ್ನೇಹವಿದ್ದಾಗ ಮಾನವ ಹಕ್ಕುಗಳ ರಕ್ಷಣೆ: ಡಾ. ಜೋಸೆಫ್ ರೊಂಕಾ

Update: 2018-02-17 14:00 GMT

ಮಂಗಳೂರು, ಫೆ. 17: ನಾವು ಜೀವಿಸುವ ಸಮಾಜದೊಳಗೆ ಪರಸ್ಪರ ನಂಬಿಕೆ, ಪ್ರೀತಿ, ಸ್ನೇಹವಿದ್ಯಾಗ ಮಾನನ ಹಕ್ಕುಗಳು ಗೌರವಿಸಲ್ಪಡುತ್ತವೆ ಮತ್ತು ರಕ್ಷಣೆಯಾಗುತ್ತವೆ ಎಂದು ಮೆಸಾಚುಸೆಟ್ಸ್‌ನ ಸ್ಪ್ರಿಂಗ್‌ಫೀಲ್ಡ್ ಕಾಲೇಜಿನ ಪ್ರೊಫೆಸರ್ ಡಾ. ಜೋಸೆಫ್ ರೊಂಕಾ ಹೇಳಿದ್ದಾರೆ.

ಅವರು ನಗರದ ರೋಶನಿ ಸ್ಕೂಲ್ ಆಫ್ ಸೋಶಿಯಲ್ ವರ್ಕ್‌ನ ಹಳೆ ವಿದ್ಯಾರ್ಥಿ ಸಂಘ ಮತ್ತು ಪಿಯುಸಿಎಲ್‌ನ ದ.ಕ. ಜಿಲ್ಲಾ ವಿಭಾಗದ ವತಿಯಿಂದ ಇಂದು ರೋಶನಿ ನಿಲಯದ ಸಭಾಂಗಣದಲ್ಲಿ ನಡೆದ ‘ಮರಿಯ ಪೈವಾ ಸ್ಮಾರಕ ಉಪನ್ಯಾಸ’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸಾಮಾಜಿಕ ಮತ್ತು ವೈಯಕ್ತಿಕ ಅಸ್ವಸ್ಥತೆಯನ್ನು ನಿವಾರಿಸುವುದು ಮಾನವ ಹಕ್ಕುಗಳನ್ನು ಉತ್ತೇಜಿಸುವ ಬಹುತ್ವದ ವಿಧಾನ’ ಎಂಬ ವಿಷಯದಲ್ಲಿ ಅವರು ಮಾತನಾಡಿದರು.

ನಾವು ಸಮುದಾಯದ ನಡುವೆ ಜೀವಿಸುವವರು. ಹಾಗಾಗಿ ಸಮುದಾಯದೊಳಗೆ ಪರಸ್ಪರು ಸಹಕಾರಿಗಳಾಗಿದ್ದು, ವಿಶ್ವಾಸದಿಂದಿದ್ದು, ಪ್ರೀತಿಯ ಸಮುದಾಯವನ್ನು ನಾವು ರಚಿಸಿಕೊಂಡಾಗ ಸಾಮಾಜಿಕ ಅಥವಾ ವೈಯಕ್ತಿಕ ಅಸ್ವಸ್ಥತೆಗೆ ಅವಕಾಶ ಇರುವುದಿಲ್ಲ ಎಂದವರು ಪ್ರತಿಪಾದಿಸಿದರು.
ಸಮಾಜದಲ್ಲಿ ಮಾನವ ಹಕ್ಕುಗಳ ಸಂಸ್ಕೃತಿಯು ನಮಗೆ ಘನತೆಯ ಜೀವನವನ್ನು ಒದಗಿಸುತ್ತದೆ. ಈ ಸಂಸ್ಕೃತಿಗೆ ನಾವು ಒತ್ತು ನೀಡೇಕಾಗಿದೆ ಎಂದು ಅವರು ಹೇಳಿದರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಿಶೋರ್ ಅತ್ತಾವರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಘುವೀರ್ ಪಿಯುಸಿಎಲ್‌ನ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News