ಅಡಿಕೆ ಬೆಳಗಾರರಿಗೆ ಆತಂಕ ಬೇಡ : ಸಚಿವ ಅನಂತ ಕುಮಾರ್ ಹೆಗಡೆ

Update: 2018-02-17 14:04 GMT

ಪುತ್ತೂರು, ಫೆ. 17: ಅಡಿಕೆಯಲ್ಲಿ ಅರೋಗ್ಯಕ್ಕೆ ಹಾನಿಕರವಾದ ಅಂಶ ಇದೆ ಎಂಬುದುನ್ನು ಹಾಗೂ ಅದರಲ್ಲೂ ಕ್ಯಾನ್ಸರ್‌ಕಾರಕ ಅಂಶ ಇರುವುದನ್ನು ನಂಬಲು ಸಾಧ್ಯವಿಲ್ಲ. ಸಿಪಿಸಿಆರ್‌ಐಯಂಥ ಸಂಸ್ಥೆಗಳ ಮೂಲಕ ಮತ್ತೊಮ್ಮೆ ಅಡಿಕೆಯನ್ನು ಪರೀಕ್ಷೆಗೆ ಒಳಪಡಿಸುವ ಪ್ರಯತ್ನ ಮಾಡಲಾಗುವುದು. ತಾನು ಓರ್ವ ಅಡಿಕೆ ಬೆಳಗಾರನಾಗಿದ್ದು, ಬೆಳೆಗಾರರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಕೇಂದ್ರ ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯ ರಾಜ್ಯ ಸಚಿವ ಅನಂತ ಕುಮಾರ್ ಹೆಗಡೆ ತಿಳಿಸಿದ್ದಾರೆ.

ಅಡಿಕೆ ಆರೋಗ್ಯಕ್ಕೆ ಹಾನಿಕರವಾಗಿದ್ದು, ಕ್ಯಾನ್ಸರ್ ಕಾರಕ ಅಂಶವನ್ನು ಒಳಗೊಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವರು ಇತ್ತೀಚೆಗೆ ಸಂಸತ್ತಿನಲ್ಲಿ ನೀಡಿದ ಹೇಳಿಕೆ ನೀಡಿರುವ ಬಗ್ಗೆ ಎಪುತ್ತೂರಿನಲ್ಲಿ ಶನಿವಾರ ಸುದ್ದಿಗಾರ ಪ್ರಶ್ನಗೆ ಉತ್ತರಿಸಿದ ಸಚಿವರು ಅಡಿಕೆಯನ್ನು ಮತ್ತೊಮ್ಮೆ ಸಂಶೋಧನಗೆ ಒಳಪಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ನಾನೂ ಓರ್ವ ಅಡಿಕೆ ಬೆಳೆಗಾರನಾಗಿದ್ದು, ಅಡಿಕೆ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಕೇಂದ್ರ ಆರೋಗ್ಯ ಸಚಿವರು ವರದಿಯ ಆಧಾರದದಲ್ಲಿ ಸಂಸತ್ತಿನಲ್ಲಿ ಉತ್ತರ ನೀಡಿರುವುದು ನಂತರ ನಮ್ಮ ಗಮನಕ್ಕೆ ಬಂದಿದ್ದು, ಇದರ ಬೆನ್ನಲ್ಲೇ ನಾವು ಆರೋಗ್ಯ ಸಚಿವರ ಜತೆ ಮಾತನಾಡಿದ್ದೇವೆ. ಅವರಿಗೆ ವಿಷಯ ಮನದಟ್ಟು ಮಾಡಿದ್ದೇವೆ ಎಂದು ತಿಳಿಸಿದರು.

ಯುಪಿಎ ಸರ್ಕಾರ ಅವಧಿಯಲ್ಲೂ ಇದೇ ವರದಿಯನ್ನು ಕೋರ್ಟಿಗೆ ಸಲ್ಲಿಸಿದ ಬಗ್ಗೆ ವಿವಾದ ಉಂಟಾಗಿತ್ತು. ಆಗ ಸರ್ಕಾರದ ವಿರುದ್ಧ ಬಿಜೆಪಿ ಕಿಡಿ ಕಾರಿತ್ತು. ಈಗ ಅದೇ ಬಿಜೆಪಿಯ ಸರ್ಕಾರ ಕೂಡ ಅದೇ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಿದ್ದು ಯಾಕೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಗಮನ ಹರಿಸಲಾಗುವುದು. ಅಡಿಕೆಗೆ ಏನೂ ಆಗುವುದಿಲ್ಲ. ಅಡಿಕೆ ಬೆಳೆಗಾರರು ಈ ವಿಚಾರದಲ್ಲಿ ಭಯ ಪಡುವ ಅಗತ್ಯವಿಲ್ಲ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ಪುತ್ತೂರು ಮಂಡಲದ ಅಧ್ಯಕ್ಷರಾದ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲ ಅಧ್ಯಕ್ಷ ಜೀವಂಧರ ಜೈನ್, ಆರೆಸ್ಸೆಸ್ ಹಿರಿಯ ಮುಖಂಡರಾದ ಡಾ.ಕಲ್ಲಡ್ಕ ಪ್ರಭಾಕರ ಭಟ್, ಪಕ್ಷದ ಮುಖಂಡರಾದ ಗೋಪಾಲಕೃಷ್ಣ ಹೇರಳೆ, ಸಾಜ ರಾಧಾಕೃಷ್ಣ ಆಳ್ವಾ,  ಅರುಣ್ ಕುಮಾರ್ ಪುತ್ತಿಲ,  ಮುರಳಿಕೃಷ್ಣ ಹಸಂತಡ್ಕ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News