ಮುಸ್ಲಿಮ್ ಹೊಣೆಗಾರ ಸಮುದಾಯ, ಕರ್ತವ್ಯ ನಿಷ್ಟೆ ನಮ್ಮಲ್ಲಿರಲಿ: ರಫೀಉದ್ದೀನ್ ಕುದ್ರೋಳಿ

Update: 2018-02-17 14:33 GMT

ಮಂಗಳೂರು, ಫೆ. 17: ಮುಸ್ಲಿಮ್ ಸಮುದಾಯ ಒಂದು ಹೊಣೆಗಾರ ಸಮುದಾಯವಾಗಿದೆ. ಜಗತ್ತನ್ನು ಶೋಷಣೆ ಮುಕ್ತಗೊಳಿಸಿ ದೈವಿಕ ನಿಯಮದ ಅನುಷ್ಟಾನ ಅದರ ಪರಮ ಗುರಿಯಾಗಿದೆ. ನಮ್ಮಲ್ಲಿ ಕರ್ತವ್ಯ ನಿಷ್ಟೆ ಇದ್ದರೆ ಯಾರೂ ನಮ್ಮನ್ನು ಶೋಷಿಸಲು ಸಾಧ್ಯವಿಲ್ಲ, ಈ ವಾಸ್ತವಿಕತೆಯನ್ನು ಮುಸ್ಲಿಮರು ಅರ್ಥ ಮಾಡಿಕೊಳ್ಳಬೇಕು ಎಂದು ಯುನಿವೆಫ್ ಕರ್ನಾಟಕ ಇದರ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಹೇಳಿದರು.

ಅವರು “ರಾಷ್ಟ್ರೀಯತೆ, ಜಾತ್ಯಾತೀತತೆ ಹಾಗೂ ಸ್ವಚ್ಛತೆ ಮತ್ತು ಪ್ರವಾದಿ ಮುಹಮ್ಮದ್(ಸ)” ಎಂಬ ಕೇಂದ್ರೀಯ ವಿಷಯದಲ್ಲಿ  2017 ರ ಡಿಸೆಂಬರ್ 8ರಿಂದ 2018 ರ ಫೆ. 23ರ ತನಕ  ಯುನಿವೆಫ್ ಕರ್ನಾಟಕ ಆಯೋಜಿಸಿರುವ “ಅರಿಯಿರಿ ಮನುಕುಲದ ಪ್ರವಾದಿಯನ್ನು” ಎಂಬ ಅಭಿಯಾನದ ಪ್ರಯುಕ್ತ  ಕುದ್ರೋಳಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ “ಭಾರತದ ಮುಸ್ಲಿಮರ ವರ್ತಮಾನ ಮತ್ತು ಭವಿಷ್ಯ ಹಾಗೂ ಆಧ್ಯಾತ್ಮಿಕ ಬದುಕು” ಎಂಬ ವಿಷಯದಲ್ಲಿ  ಮಾತನಾಡಿದರು. 

“ಭಾರತದಲ್ಲಿ ಸರ್ವ ರಂಗಗಳಲ್ಲಿನ ಮುಸ್ಲಿಮರ ಹಿಂದುಳಿಯುವಿಕೆಗೆ ಸರಕಾರಗಳು ಎಷ್ಟು ಕಾರಣವೋ ಮುಸ್ಲಿಮ್ ರಾಜಕಾರಿಣಿಗಳು ಅಷ್ಟೇ ಪ್ರಮಾಣದಲ್ಲಿ ಕಾರಣಕರ್ತರಾಗಿದ್ದಾರೆ. ಮುಸ್ಲಿಮರಿಗೆ ಅನ್ಯಾಯವಾದಾಗ ಕೇವಲ ಮೊಸಳೆ ಕಣ್ಣೀರು ಸುರಿಸಿ ಸಾಂತ್ವನ ನೀಡುವ ರಾಜಕೀಯ ಪಕ್ಷಗಳು ಇತರ ಜನಾಂಗ ತಮ್ಮ ನೋವನ್ನು ತೋಡಿಕೊಂಡಾಗ ಅದು ವಾಸ್ತವಿಕತೆಗೆ ವಿರುದ್ಧವಾಗಿದ್ದರೂ, ಅದರ ಪರಿಹಾರಕ್ಕಾಗಿ ತಾಮುಂದು ನಾಮುಂದು ಎಂದು ನಡೆಸುವ ಸ್ಪರ್ಧೆ ನಮ್ಮ ದೌರ್ಬಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.” ಎಂದು ಅವರು ಹೇಳಿದರು. 

“ಪ್ರತಿ ರಾಜಕೀಯ ಪಕ್ಷಗಳಿಗೆ ತಮ್ಮದೇ ಆದ ಅಜೆಂಡಾಗಳಿರುವುದರಿಂದ ಮುಸ್ಲಿಮರ ಸಮಸ್ಯೆಗಳು ಅವರಿಗೆ ಪ್ರಾಮುಖ್ಯವಾಗಿ ಕಂಡು ಬರುವುದಿಲ್ಲ. ಆದುದ ರಿಂದ ಮುಸಲ್ಮಾನರು ನಿರ್ದಿಷ್ಟ ಗುರಿಯೊಂದಿಗೆ ಅದರ ಅನುಷ್ಟಾನಕ್ಕಾಗಿ ಟೊಂಕ ಕಟ್ಟಿ ನಿಲ್ಲಬೇಕಾಗಿದೆ, ಆ ಮೂಲಕ ನಮ್ಮ ಸಮಸ್ಯೆಗಳನ್ನು ನಾವೇ ಪರಿಹರಿಸಬೇಕಾಗಿದೆ ಹಾಗೂ ನಮ್ಮನ್ನು ಕಡೆಗಣಿಸುವವರನ್ನು ತಿರಸ್ಕರಿಸಬೇಕಾಗಿದೆ” ಎಂದು ಅವರು ಹೇಳಿದರು.

“ಪ್ರವಾದಿ ಮುಹಮ್ಮದ್ (ಸ) ನಮ್ಮ ನಾಯಕರಾಗಿದ್ದಾರೆ. ಬದುಕಿನ ಪ್ರತಿಯೊಂದು ಆಯಾಮಗಳಲ್ಲಿ ಅವರನ್ನು ಅನುಸರಿಸಿದರೆ ಮತ್ತು ಪ್ರವಾದಿ ಸಂದೇಶ ಗಳನ್ನು ಈ ಜಗತ್ತಿನಲ್ಲಿ ಅನುಷ್ಟಾನಿಸಲು ಪ್ರಯತ್ನಿಸಿದರೆ ನಮ್ಮ ಗತ ಕಾಲ ಮರಳಿ ಬರುತ್ತದೆ” ಎಂದರು. 

ರಾಹಿಲ್ ರಝಾಕ್ ಕಿರ್‌ಅತ್ ಪಠಿಸಿದರು. ಜಿಲ್ಲಾಧ್ಯಕ್ಷ ಸೈಫುದ್ದೀನ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ರಾಜ್ಯ ಕಾರ್ಯದರ್ಶಿ ಯು.ಕೆ. ಖಾಲಿದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕುದ್ರೋಳಿ ಶಾಖೆಯ ಅಧ್ಯಕ್ಷ ಹುದೈಫ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News