ಫೆ.21: ತಕ್ಷಣ ಪಡಿತರ ಚೀಟಿ ವಿತರಣೆ ಯೋಜನೆಗೆ ಚಾಲನೆ

Update: 2018-02-17 14:35 GMT

ಮಂಗಳೂರು, ಫೆ.17: ದೇಶದಲ್ಲೇ ಪ್ರಪ್ರಥಮ ಬಾರಿಗೆ ಜಾರಿಗೊಳ್ಳಲಿರುವ ತಕ್ಷಣ ಪಡಿತರ ಚೀಟಿ ವಿತರಣೆಯು ಫೆ.20ರಿಂದ ತಾಲೂಕು ಮಟ್ಟದಲ್ಲಿ ಆರಂಭಗೊಳ್ಳಲಿದೆ. ಮಂಗಳೂರು ತಾಲೂಕು ಮಟ್ಟದ ಈ ಯೋಜನೆಗೆ ಫೆ.21ರಂದು ಉಳ್ಳಾಲ ನಗರಸಭೆಯ ಮೈದಾನದಲ್ಲಿ ಚಾಲನೆ ನೀಡಲಾಗುವುದು ಎಂದು ಸಚಿವ ಯು.ಟಿ.ಖಾದರ್ ಹೇಳಿದರು.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 1.20 ಲಕ್ಷ ರೂ. ಒಳಗೆ ಆದಾಯ ಪ್ರಮಾಣ ಪತ್ರ ಹೊಂದಿರುವವರು ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರು. ಮಂಗಳೂರು ತಾಲೂಕು ವ್ಯಾಪ್ತಿಯ ಅರ್ಹರು ಅಂದು ಉಳ್ಳಾಲಕ್ಕೆ ಆಗಮಿಸಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವಾಗ ಆದಾಯ ಪ್ರಮಾಣಪತ್ರದೊಂದಿಗೆ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್‌ನೊಂದಿಗೆ ಮನೆಯ ಒಬ್ಬ ಹಿರಿಯ ಸದಸ್ಯ ಹಾಜರಿರಬೇಕು. ಅರ್ಜಿ ಸ್ವೀಕರಿಸುವ ಆಹಾರ ನಿರೀಕ್ಷಕರು ಸ್ಥಳದಲ್ಲೇ ರೇಶನ್ ಕಾರ್ಡ್ ವಿತರಿಸಲಿದ್ದಾರೆ ಎಂದರು.

ಮುಂದಿನ ದಿನಗಳಲ್ಲಿ ಆಯಾ ತಾಲೂಕಿನ ಆಹಾರ ನಿರೀಕ್ಷರನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಿದ ತಕ್ಷಣ ರೇಶನ್ ಕಾರ್ಡ್ ಪಡೆಯಲು ಅವಕಾಶವಿದೆ. ಇದೊಂದು ಕ್ರಾಂತಿಕಾರಿ ಯೋಜನೆಯಾಗಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದರು.

8 ಲಕ್ಷ ಬಾಕಿ: ಈವರೆಗೆ ರಾಜ್ಯದಲ್ಲಿ 13.50 ಲಕ್ಷ ಪಡಿತರ ಚೀಟಿಗಳನ್ನು ಮನೆಬಾಗಿಲಿಗೆ ಅಂಚೆ ಮೂಲಕ ರವಾನಿಸಲಾಗಿದೆ. ಇನ್ನೂ 8 ಲಕ್ಷ ಮಂದಿಗೆ ರೇಶನ್ ಕಾರ್ಡ್ ನೀಡಲು ಬಾಕಿ ಇದೆ. ಅಧಿಕಾರಿಗಳು ಪರಿಶೀಲನೆ ನಡೆಸಿ ಅವರಿಗೆ ಶೀಘ್ರ ಪಡಿತರ ಚೀಟಿಗಳನ್ನು ಹಂಚಲಿದ್ದಾರೆ.

ಕ್ರಿಮಿನಲ್ ಕೇಸ್: ಶ್ರೀಮಂತರು ಬಿಪಿಎಲ್ ಕಾರ್ಡ್ ಪಡೆದಿದ್ದರೆ ಅದನ್ನು ಪತ್ತೆ ಹಚ್ಚಲು ಕ್ರಮ ಜರಗಿಸಲಾಗುತ್ತದೆ. ಪ್ರತಿಯೊಂದು ಕಾರ್ಡ್ ಪತ್ತೆ ಹಚ್ಚಿ ಕೊಟ್ಟರೆ ತಲಾ 400 ರೂ. ನಂತೆ ಬಹುಮಾನ ನೀಡಲಾಗುವುದು. ಇದು ನಿರುದ್ಯೋಗಿಗಳಿಗೆ ವರದಾನವಾಗಲಿದೆಯಲ್ಲದೆ, ಸರಕಾರದ ಸೌಲಭ್ಯಗಳನ್ನು ದುರು ಪಯೋಗಪಡಿಸಿಕೊಳ್ಳುವವರರನ್ನು ಪತ್ತೆ ಹಚ್ಚಲು ಸುಲಭವಾಗಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News