×
Ad

ಸ್ಪಂದಿಸದ ಸರಕಾರ: ಬಿಸಿಯೂಟ ನೌಕರರ ಪ್ರತಿಭಟನೆ

Update: 2018-02-17 20:06 IST

ಮಂಗಳೂರು, ಫೆ.17: ರಾಜ್ಯ ಸರಕಾರವು ಬಜೆಟ್‌ನಲ್ಲಿ ಬಿಸಿಯೂಟ ನೌಕರರ ಬೇಡಿಕೆಗೆ ಸ್ಪಂದಿಸದಿರವುದನ್ನು ಖಂಡಿಸಿ ಸಿಐಟಿಯು ನೇತೃತ್ವದ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ದ.ಕ.ಜಿಲ್ಲಾ ಸಮಿತಿಯು ದ.ಕ.ಜಿಲ್ಲಾಧಿಕಾರಿಯ ಕಚೇರಿ ಮುಂದೆ ಶನಿವಾರ ಪ್ರತಿಭಟನೆ ನಡೆಸಿತು.

ಸಿಐಟಿಯು ದ.ಕ.ಜಿಲ್ಲಾ ಉಪಾಧ್ಯಕ್ಷ ವಸಂತ ಆಚಾರಿ ಮಾತನಾಡಿ ಬಿಸಿಯೂಟ ನೌಕರರಿಗೆ ವೇತನ ಏರಿಕೆ ಮಾಡದೆ ರಾಜ್ಯ ಸರಕಾರ ಅನ್ಯಾಯ ಎಸಗಿದೆ. ಬಿಸಿಯೂಟ ಯೋಜನೆಯು ಕೇಂದ್ರ ಹಾಗೂ ರಾಜ್ಯ ಸರಕಾರದ್ದಾಗಿದೆ. ರಾಜ್ಯದಲ್ಲಿ 1,18,199 ಅಡುಗೆ ನೌಕರರು 54,110 ಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ನೌಕರರು ಕೇವಲ 300ರಿಂದ 650 ರೂ.ಗೆ ದುಡಿಯುತ್ತಾ ಬದುಕು ಸಾಗಿಸುತ್ತಿದ್ದಾರೆ. ಸಿಐಟಿಯು ನೇತೃತ್ವದ ಹಲವಾರು ಹೋರಾಟದ ಭಾಗವಾಗಿ ರಾಜ್ಯ ಸರಕಾರ ಅಲ್ಪಸ್ವಲ್ಪ ಏರಿಕೆ ಮಾಡಿರುತ್ತದೆ. ಇತ್ತೀಚೆಗೆ ಈ ನೌಕರರಿಗೆ ಕೇವಲ 2,200 ರೂ. ನೀಡಲಾಗುತ್ತದೆ. ವೇತನ ಏರಿಕೆಗೆ ಆಗ್ರಹಿಸುತ್ತಿದ್ದರೂ ಸರಕಾರ ಸ್ಪಂದಿಸುತ್ತಿಲ್ಲ ಎಂದರು.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸ್ಪಂದಿಸುವುದಾಗಿ ಹೇಳಿದ್ದರೂ ಬಜೆಟ್‌ನಲ್ಲಿ ಯಾವುದೇ ಘೋಷಣೆ ಮಾಡಿಲ್ಲ ಎಂದು ವಸಂತ ಆಚಾರಿ ಅಸಮಾಧಾನ ವ್ಯಕ್ತಪಡಿಸಿದರು.

ಸಂಘದ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸಂಘದ ನಾಯಕಿಯರಾದ ರೇಖಲತಾ, ಪ್ರಮೀಳಾ, ಭಾರತಿ, ಅನಿತಾ, ಎಮೇಜಾ ಪಾಲ್ಗೊಂಡಿದ್ದರು. ಕಾರ್ಯದರ್ಶಿ ಗಿರಿಜಾ ಸ್ವಾಗತಿಸಿದರು. ಖಜಾಂಚಿ ಭವ್ಯಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News