ತ್ರಿಪುರಾ ವಿಧಾನಸಭೆ ಚುನಾವಣೆ: ಫೆ.18ರಂದು ಮತದಾನ

Update: 2018-02-17 16:34 GMT

ಅಗರ್ತಲ, ಫೆ.17: ತ್ರಿಪುರಾ ವಿಧಾನಸಭೆ ಚುನಾವಣೆಗೆ ಫೆ.18ರಂದು (ರವಿವಾರ) ಮತದಾನ ನಡೆಯಲಿದ್ದು, ಕಳೆದ 25 ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಎಡಪಕ್ಷಗಳಿಗೆ ಈ ಬಾರಿ ಬಿಜೆಪಿಯಿಂದ ತೀವ್ರ ಸ್ಪರ್ಧೆ ಎದುರಾಗುವ ನಿರೀಕ್ಷೆಯಿದೆ.

ಈ ಬಾರಿ ತ್ರಿಪುರಾದಲ್ಲಿ ಗೆಲುವು ಪಡೆಯಲು ಶತಾಯಗತಾಯ ಪ್ರಯತ್ನ ನಡೆಸಿರುವ ಬಿಜೆಪಿಯ ಪರ ಪ್ರಧಾನಿ ನರೇಂದ್ರ ಮೋದಿ ನಾಲ್ಕು ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.

ಮುಖ್ಯಮಂತ್ರಿಯಾಗಿ ಐದನೇ ಕಾರ್ಯಾವಧಿಯ ನಿರೀಕ್ಷೆಯಲ್ಲಿರುವ ಮಾಣಿಕ್ ಸರ್ಕಾರ್ ಸಿಪಿಐ(ಎಂ) ಚುನಾವಣಾ ಪ್ರಚಾರ ಕಾರ್ಯದ ನೇತೃತ್ವ ವಹಿಸಿದ್ದು ರಾಜ್ಯದಲ್ಲಿ ಸುಮಾರು 50 ಚುನಾವಣಾ ಪ್ರಚಾರ ರ್ಯಾಲಿಗಳಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ ಸೀತಾರಾಂ ಯೆಚೂರಿ, ಬೃಂದಾ ಕಾರಟ್‌ರಂತಹ ಪಕ್ಷದ ಪ್ರಮುಖರೂ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರು.

 ಆದರೆ ಈ ಬಾರಿ ಮಾಣಿಕ್ ಸರ್ಕಾರ್ ಗೆಲುವು ಅಷ್ಟೊಂದು ಸುಲಭವಲ್ಲ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಕೇಂದ್ರ ಸರಕಾರದ ಬೆಂಬಲ ಪಡೆದ ಬಿಜೆಪಿ ರಾಜ್ಯದ ಅಭಿವೃದ್ಧಿಯಲ್ಲಿ ಹಾಗೂ ಆರ್ಥಿಕ ಅಭಿವೃದ್ಧಿಯಲ್ಲಿ ಹಿನ್ನಡೆಯಾಗಿದೆ ಎಂದು ಅಬ್ಬರದ ಪ್ರಚಾರ ನಡೆಸುವ ಮೂಲಕ ಮತದಾರರ ಮೇಲೆ ಪ್ರಭಾವ ಬೀರಲು ಶತಪ್ರಯತ್ನ ನಡೆಸಿದೆ.

  60 ಸದಸ್ಯ ಬಲದ ವಿಧಾನಸಭೆಗೆ 307 ಅಭ್ಯರ್ಥಿಗಳು ಕಣದಲ್ಲಿದ್ದು, 59 ಸ್ಥಾನಗಳಿಗೆ ಫೆ.18ರಂದು (ಇಂದು) ಚುನಾವಣೆ ನಡೆಯಲಿದೆ. ಚಾರ್ಲಿಯಮ್ ಕ್ಷೇತ್ರದ ಸಿಪಿಐ(ಎಂ) ಅಭ್ಯರ್ಥಿ ರಾಮೇಂದ್ರ ನಾರಾಯಣ್‌ದೇವ್ ಬರ್ಮ ಐದು ದಿನದ ಹಿಂದೆ ನಿಧನರಾದ ಕಾರಣ ಈ ಕ್ಷೇತ್ರದ ಮತದಾನವನ್ನು ಮುಂದೂಡಲಾಗಿದ್ದು ಮಾ.12ಕ್ಕೆ ನಿಗದಿಯಾಗಿದೆ. ಎಸ್‌ಟಿ ಅಭ್ಯರ್ಥಿಗಳಿಗೆ 20 ಕ್ಷೇತ್ರವನ್ನು ಮೀಸಲಿಡಲಾಗಿದೆ. ಸಿಪಿಐ(ಎಂ) 57 ಸ್ಥಾನಕ್ಕೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಮಿತ್ರಪಕ್ಷಗಳಾದ ಆರ್‌ಎಸ್‌ಪಿ, ಫಾರ್ವರ್ಡ್ ಬ್ಲಾಕ್ ಹಾಗೂ ಸಿಪಿಐ ತಲಾ ಒಂದು ಸ್ಥಾನದಲ್ಲಿ ಸ್ಪರ್ಧಿಸಲಿವೆ.

 ಬುಡಕಟ್ಟು ಸಮುದಾಯದ ಸಂಘಟನೆ ‘ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ’(ಐಪಿಎಫ್‌ಟಿ) ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ 51 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು ಉಳಿದ 9 ಸ್ಥಾನಗಳನ್ನು ಐಪಿಎಫ್‌ಟಿಗೆ ಬಿಟ್ಟುಕೊಟ್ಟಿದೆ.

ಇನ್ನೊಂದೆಡೆ, ಕಾಂಗ್ರೆಸ್ ಪಕ್ಷ ಏಕಾಂಗಿಯಾಗಿ ಸ್ಪರ್ಧೆಗೆ ಇಳಿದಿದ್ದು 59 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಬಿರುಸಿನ ಪ್ರಚಾರ ಕಾರ್ಯ ನಡೆಸಲಾಗಿದ್ದು, ಪ್ರಚಾರದ ಅಂತಿಮ ದಿನದಂದು ರಾಹುಲ್ ಗಾಂಧಿ ಅಗರ್ತಲಕ್ಕಿಂತ 180 ಕಿ.ಮೀ. ದೂರದ ಕೈಲಾಸಹರ್ ಎಂಬಲ್ಲಿ ಚುನಾವಣಾ ಪ್ರಚಾರ ರ್ಯಾಲಿ ನಡೆಸಿದ್ದರು.

  ಇಂಡೊ-ಟಿಬೆಟಿಯನ್ ಬಾರ್ಡರ್ ಪೊಲೀಸ್‌ನ ಪ್ರಧಾನ ನಿರ್ದೇಶಕ ಆರ್.ಕೆ.ಪಚ್‌ನಂದ ಅವರನ್ನು ಚುನಾವಣೆಯ ಭದ್ರತಾ ಕಾರ್ಯದ ವಿಶೇಷ ವೀಕ್ಷಕರನ್ನಾಗಿ ನೇಮಿಸಲಾಗಿದೆ ಎಂದು ತ್ರಿಪುರಾದ ಮುಖ್ಯ ಚುನಾವಣಾಧಿಕಾರಿ ಶ್ರೀರಾಮ್ ತರನಿಕಾಂತಿ ತಿಳಿಸಿದ್ದಾರೆ.

ರಾಜ್ಯದಾದ್ಯಂತ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದ್ದು ಕೇಂದ್ರ ಸಶಸ್ತ್ರ ಪಡೆಯ 300 ತುಕಡಿಗಳ ಜೊತೆಗೆ ರಾಜ್ಯದ ಸಶಸ್ತ್ರ ಪಡೆಗಳನ್ನೂ ನಿಯೋಜಿಸಲಾಗಿದೆ. ಅಲ್ಲದೆ ತ್ರಿಪುರಾದ 856 ಕಿ.ಮೀ ವ್ಯಾಪ್ತಿಯ ಗಡಿಭಾಗದುದ್ದಕ್ಕೂ (ಬಾಂಗ್ಲಾದೇಶದೊಂದಿಗಿನ ಗಡಿ) ಗಡಿಭದ್ರತಾ ಪಡೆಯ ಯೋಧರು ಸೂಕ್ಷ್ಮವಾಗಿ ನಿಗಾ ವಹಿಸಲಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಬಾಕ್ಸ್:

 25 ಲಕ್ಷ ಮತದಾರರು ರಾಜ್ಯದಲ್ಲಿ ಒಟ್ಟು 25 ಲಕ್ಷ ಮತದಾರರಿದ್ದು ಇವರಲ್ಲಿ ಸುಮಾರು 13 ಲಕ್ಷದಷ್ಟು ಪುರುಷರು ಹಾಗೂ 12 ಲಕ್ಷದಷ್ಟು ಮಹಿಳೆಯರು. 47,803 ಮಂದಿ ಇದೇ ಪ್ರಥಮ ಬಾರಿಗೆ ಮತ ಚಲಾಯಿಸಲಿದ್ದಾರೆ. ಬೆಳಿಗ್ಗೆ 7:00 ರಿಂದ ಸಂಜೆ 4:00ರವರೆಗೆ, 3,214 ಮತದಾನ ಕೇಂದ್ರಗಳಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ 47 ಮತದಾನ ಕೇಂದ್ರಗಳನ್ನು ಮಹಿಳೆಯರೇ ನಿರ್ವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News