ಪೊಲೀಸ್ ಇಲಾಖೆಯಲ್ಲಿ ಕ್ರೀಡಾಪಟುಗಳಿಗೆ ಮೀಸಲಾತಿ ಪ್ರಕಟ

Update: 2018-02-17 15:48 GMT

ಬ್ರಹ್ಮಾವರ, ಫೆ.17: ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಮಂಡಿಸಿದ ಬಜೆಟ್‌ನ ಗೃಹ ಇಲಾಖೆಯ ಪ್ರಸ್ತಾಪಗಳಲ್ಲಿ ಪೊಲೀಸ್ ಇಲಾಖೆಯ ನೇಮಕಾತಿಗಳಲ್ಲಿ ರಾಜ್ಯದ ಪ್ರತಿಭಾನ್ವಿತ, ಸಾಧಕ ಕ್ರೀಡಾಪಟುಗಳಿಗೆ ವಿಶೇಷ ಮೀಸಲಾತಿಯನ್ನು ಪ್ರಕಟಿಸಲಾಗಿದೆ ಎಂದು ರಾಜ್ಯ ಮೀನುಗಾರಿಕೆ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಉಡುಪಿ ಹಾಗೂ ರೋಟರಿ ಕ್ಲಬ್ ಬ್ರಹ್ಮಾವರ ಇವರ ಸಹಯೋಗದೊಂದಿಗೆ ಬ್ರಹ್ಮಾವರದ ಹೊಟೇಲ್ ಆಶ್ರಯದ ಆನಂದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶನಿವಾರ ಆಯೋಜಿಸಲಾದ ದೈಹಿಕ ಶಿಕ್ಷಣ ಶಿಕ್ಷಕರ ಕಾರ್ಯಾಗಾರ ಹಾಗೂ ರಾಷ್ಟ್ರಮಟ್ಟದ ಕ್ರೀಡಾ ಪ್ರತಿಭೆಗಳಿಗೆ ಪುರಸ್ಕಾರ, ನಿವೃತ್ತ ಮತ್ತು ಸಾಧಕ ದೈಹಿಕ ಶಿಕ್ಷಣ ಶಿಕ್ಷಕರಿಗೆ ಸಮ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ರಾಜ್ಯದ ಹೊಸ ಕ್ರೀಡಾನೀತಿಯನ್ನು ಅಂತಿಮಗೊಳಿಸಲಾಗಿದ್ದು, ಅದೀಗ ಪರಿಶೀಲನೆಗಾಗಿ ರಾಜ್ಯ ಹಣಕಾಸು ಇಲಾಖೆಗೆ ಹೋಗಿದೆ. ಮುಂದಿನ ಕ್ಯಾಬಿನೇಟ್ ಸಭೆಯ ಮುಂದೆ ಕ್ರೀಡಾನೀತಿ ಚರ್ಚೆಗೆ ಬರಲಿದ್ದು, ಆ ಬಳಿಕ ಶೀಘ್ರವೇ ಅದು ಜಾರಿಗೆ ಬರಲಿದೆ ಎಂದರು.

ಈ ಕ್ರೀಡಾ ನೀತಿಯಲ್ಲಿ ಇನ್ನು ಮುಂದೆ ಸರಕಾರದ ವಿವಿಧ ಇಲಾಖೆಗಳ ನೇಮಕಾತಿಗಳಲ್ಲಿ ಸಾಧಕ ಕ್ರೀಡಾಪಟುಗಳಿಗೆ ಮೀಸಲಾತಿಯನ್ನು ಕಡ್ಡಾಯ ಗೊಳಿಸಲಾಗಿದೆ. ಈ ಮೂಲಕ ಕ್ರೀಡಾಕ್ಷೇತ್ರದಲ್ಲಿ ಬೆಳಗುವ ಆಸಕ್ತಿ ಹೊಂದಿರುವ ಕ್ರೀಡಾಪಟುಗಳಿಗೆ ಅವರ ಭವಿಷ್ಯದ ಕುರಿತಂತೆ ಭದ್ರತೆಯನ್ನು ನೀಡಲಾ ಗುತ್ತದೆ ಎಂದರು.

ಸಾವಿರ ಕ್ರೀಡಾಪಟುಗಳ ದತ್ತು: ಕ್ರೀಡಾಕ್ಷೇತ್ರಕ್ಕೆ ವಿಶೇಷ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಬಾರಿಯ ಬಜೆಟ್‌ನಲ್ಲಿ ದಸರಾ ಕ್ರೀಡಾಕೂಟದ ಸ್ವರೂಪವನ್ನು ಬದಲಿಸಿ ಅದನ್ನು ರಾಷ್ಟ್ರೀಯ ಕ್ರೀಡಾಕೂಟದ ಮಾದರಿಯಲ್ಲಿ ನಡೆಸಲು ನಿರ್ಧರಿಸಿದ್ದು, ಇದಕ್ಕಾಗಿ 7 ಕೋಟಿ ರೂ.ಗಳನ್ನು ನೀಡಲಾಗಿದೆ. ‘ದಸರಾ-ಸಿಎಂ ಕಪ್’ ಹೆಸರಿನಲ್ಲಿ ಈ ಕ್ರೀಡಾಕೂಟ ವಿವಿಧ ಹಂತಗಳಲ್ಲಿ ಕ್ರೀಡಾ ಪ್ರತಿಭೆಗಳನ್ನು ಗುರುತಿಸುವ ಕೆಲಸ ಮಾಡಲಿದೆ.

ಅಲ್ಲದೇ ಇದರಲ್ಲಿ ಬೆಳಕಿಗೆ ಬರುವ ರಾಜ್ಯದ 1000 ಮಂದಿ ಅತ್ಯಂತ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಗುರುತಿಸಿ ಅವರನ್ನು ರಾಜ್ಯ ಸರಕಾರ ದತ್ತು ತೆಗೆದುಕೊಂಡು ಅವರ ಕ್ರೀಡಾ ಪ್ರತಿಭೆ ಬೆಳಗಲು ಸಂಪೂರ್ಣ ಪ್ರೋತ್ಸಾಹ ನೀಡಲಿದೆ. ಇದಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರಕಾರ ಮಾತ್ರವಲ್ಲದೇ ಪ್ರಮುಖ ಕಾರ್ಪೋರೇಟ್ ಕಂಪೆನಿಗಳ ನೆರವು ಪಡೆಯಲಾಗುವುದು.

1000 ಮಂದಿ ಕ್ರೀಡಾಪಟುಗಳಲ್ಲಿ 19ವರ್ಷದೊಳಗಿನ 750 ಹಾಗೂ 19ವರ್ಷ ಮೇಲಿನ 250 ಮಂದಿ ಬಾಲಕ-ಬಾಲಕಿಯರಿರುತ್ತಾರೆ. ಇವರಿಗೆ ವಿಶೇಷ ತರಬೇತಿಯನ್ನು ನೀಡಿ ಏಷ್ಯನ್ ಕ್ರೀಡಾಕೂಟ, ಕಾಮನ್ವೆಲ್ತ್ ಹಾಗೂ ಒಲಿಂಪಿಕ್ಸ್‌ಗಳಲ್ಲಿ ಪದಕ ಗೆಲ್ಲುವ ಕ್ರೀಡಾಪಟುಗಳಾಗಿ ರೂಪಿಸುವ ಗುರಿಯನ್ನು ಹೊಂದಲಾಗಿದೆ ಎಂದರು. ಇದಕ್ಕಾಗಿ ಪ್ರತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿರುವ ದೈಹಿಕ ಶಿಕ್ಷಣ ಶಿಕ್ಷಕರು ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಗುರುತಿಸಿ, ಅವರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಶ್ರಮಿಸಬೇಕಿದೆ. ಈಗ 200 ವಿದ್ಯಾರ್ಥಿಗಳಿರುವ ಶಾಲೆಗೆ ಮಾತ್ರ ಪಿಟಿ ಶಿಕ್ಷಕರ ನೇಮಕಾತಿಗೆ ಅವಕಾಶವಿದ್ದು, ಇದನ್ನು 200ಕ್ಕೂ ಕಡಿಮೆ ವಿದ್ಯಾರ್ಥಿಗಳಿರುವ ಪರಿಸರದ ಮೂರ್ನಾಲ್ಕು ಶಾಲೆಗಳಿಗೆ ಸೇರಿ ಒಬ್ಬ ಪಿಟಿ ಶಿಕ್ಷಕರನ್ನು ನೇಮಿಸುವ ಬಗ್ಗೆ ಶಿಕ್ಷಣ ಸಚಿವರೊಂದಿಗೆ ಮಾತನಾಡುವುದಾಗಿ ತಿಳಿಸಿದರು. 

ಅಲ್ಲದೇ ಪ್ರತಿ ತಾಲೂಕಿನಲ್ಲಿ ಅತ್ಯುತ್ತಮ ಕ್ರೀಡಾ ಸಾಧನೆ ಮಾಡಿದ ಶಾಲೆಯನ್ನು ಗುರುತಿಸಿ ಅದಕ್ಕೆ ಒಂದು ಲಕ್ಷ ರೂ. ಪ್ರೋತ್ಸಾಹಧನ ನೀಡುವ ಯೋಜನೆ ಇದ್ದು, ಇದಕ್ಕಾಗಿ ದೈಹಿಕ ಶಿಕ್ಷಕರು ಹೆಚ್ಚು ಮುತುವರ್ಜಿಯಿಂದ ಕೆಲಸ ಮಾಡುವಂತೆ ತಿಳಿಸಿದರು. ಅಲ್ಲದೇ ನಮ್ಮೂರ ಶಾಲೆಗೆ ನಮ್ಮೂರ ಯೋಜನೆಯಡಿ ಉತ್ತಮ ಕ್ರೀಡಾಪಟುಗಳನ್ನು ನೀಡಿದ ಶಾಲಾ ಶಿಕ್ಷಕಿರಿಗೆ 5000ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದರು.

ಸಮಾರಂಭದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ರೀಡೆಗಳಲ್ಲಿ ಪದಕ ಪಡೆದ, ಸಾಧನೆ ಮಾಡಿದ ಶಾಲಾ ತಂಡಗಳು, ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ಹಾಗೆ ನಿವೃತ್ತ, ಸಾಧಕ ದೈಹಿಕ ಶಿಕ್ಷಣ ಶಿಕ್ಷಕರನ್ನು ಸಚಿವರು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರ್ಗಿ, ಡಿಡಿಪಿಐ ಶೇಷಶಯನ ಕಾರಿಂಜ, ರಾಜ್ಯ ಅಮೆಚೂರು ಕಬಡ್ಡಿ ಫೆಡರೇಷನ್ ಅಧ್ಯಕ್ಷ ರಾಕೇಶ್ ಮಲ್ಲಿ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಬೋಜೆಗೌಡ, ಬಿಇಒ ಲೋಕೇಶ್, ಜಿಲ್ಲಾ ಶಿಕ್ಷಣಾಧಿಕಾರಿ ನಾಗೇಶ್ ಶಾನುಭೋಗ್, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಮಧುಕರ್ ಎಸ್., ಬ್ರಹ್ಮಾವರದ ಜ್ಞಾನವಸಂತ ಶೆಟ್ಟಿ, ರಾಘವೇಂದ್ರ ಎಂ.ಸಾಮಗ, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News