ಅನಂತಕೃಷ್ಣರಿಗೆ ಕೆ.ಕೆ.ಪೈ ರಾಷ್ಟ್ರೀಯ ಬ್ಯಾಂಕರ್ ಪ್ರಶಸ್ತಿ ಪ್ರದಾನ

Update: 2018-02-17 15:51 GMT

ಮಣಿಪಾಲ, ಫೆ.17: ಇಂದು ಬ್ಯಾಂಕರ್‌ಗಳು ಅಭಿವೃದ್ಧಿಯ ನೆಪದಲ್ಲಿ ಪಿಟ್ಜಾ ಸರಬರಾಜು ಮಾಡುವ ಹುಡುಗರಂತೆ ವೇಗವಾಗಿ ಗುರಿ ಮುಟ್ಟುವ ಧಾವಂತಕ್ಕೆ ಸಿಲುಕಿ ಇಂದು ಕಾಣುವ ಬ್ಯಾಂಕಿಂಗ್ ಹಗರಣಗಳಿಗೆ ಕಾರಣರಾಗುತಿದ್ದಾರೆ ಎಂದು ಕರ್ನಾಟಕ ಬ್ಯಾಂಕಿನ ನಿವೃತ್ತ ಅಧ್ಯಕ್ಷ ಅನಂತಕೃಷ್ಣ ಹೇಳಿದ್ದಾರೆ.

ಮಣಿಪಾಲದ ಕೆ.ಕೆ.ಪೈ ಟ್ರಸ್ಟ್ ವತಿಯಿಂದ ನೀಡಲಾಗುವ ವಾರ್ಷಿಕ ಕೆ.ಕೆ.ಪೈ ರಾಷ್ಟ್ರೀಯ ಪ್ರಶಸ್ತಿಯನ್ನು ಟ್ಯಾಪ್ಮಿ ಸಭಾಂಗಣದಲ್ಲಿ ಸ್ವೀಕರಿಸಿ ಅವರು ಮಾತನಾಡುತಿದ್ದರು. ಪ್ರಶಸ್ತಿಯು ಒಂದು ಲಕ್ಷ ರೂ.ನಗದು, ಬೆಳ್ಳಿಯ ಸ್ಮರಣಿಕೆ, ಪ್ರಶಸ್ತಿ ಪತ್ರ, ಶಾಲು, ಫಲಪುಷ್ಪಗಳನ್ನು ಒಳಗೊಂಡಿತ್ತು.

 ನೀವು ಪೊಲೀಸ್, ಅಂಬುಲೆನ್ಸ್, ಪಿಟ್ಜಾ ಸರಬರಾಜು ಹುಡುಗನಿಗೆ ತುರ್ತು ಕರೆ ಮಾಡಿದರೆ, ಮೊದಲು ಬರುವುದು ಪಿಟ್ಜಾ ಹುಡುಗ. ಅವನಿಗೆ ಗುರಿ ಮುಟ್ಟುವುದೊಂದೇ ದ್ಯಾನವಾಗಿರುತ್ತದೆ. ಅದೇ ರೀತಿ ಇಂದು ಬ್ಯಾಂಕುಗಳು ಅಭಿವೃದ್ಧಿಯ ಹಿಂದೆ ಬಿದ್ದು, ಉಳಿದೆಲ್ಲಾ ಎಚ್ಚರಿಕೆಯನ್ನು ಕಡೆಗಣಿಸುತ್ತಿವೆ. ನೀವು ನಿಮ್ಮ ಸ್ಥಾನ ಮತ್ತು ಹಿಡಿತದ ಮೇಲೆ ಹೆಚ್ಚು ನಿಗಾ ಇರಿಸಬೇಡಿ ಎಂದರು.

46ವರ್ಷಗಳ ಕಾಲ ಕರ್ನಾಟಕ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಬ್ಯಾಂಕ್‌ನ್ನು ಹೇಗೆ ಹಂತ ಹಂತವಾಗಿ ಪ್ರಗತಿಯತ್ತ ಕೊಂಡೊಯ್ಯಲಾಯಿತು ಎಂಬುದನ್ನು ನೆನಪಿನ ಸುರುಳಿ ಬಿಚ್ಚುತ್ತಾ ವಿವರಿಸಿದ ಅವರು, ಇದಕ್ಕಾಗಿ ಹಲವು ಸಂದರ್ಭದಲ್ಲಿ ‘ಕೆಚ್ಚೆದೆ’ಯನ್ನು ಪ್ರದರ್ಶಿಸಿದ್ದನ್ನು ವಿವರಿಸಿದರು.
1992-93ರಲ್ಲಿ ಆರ್‌ಬಿಐ ಕಣ್ಣಳತೆಯಿಂದ ಹೊರಬಂದ ಸಂದರ್ಭ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮೊದಲ ಬಾರಿ ‘ಕೋರ್ ಬ್ಯಾಂಕಿಂಗ್’ ವ್ಯವಸ್ಥೆಯನ್ನು ಅಳವಡಿಸಲು ನಡೆಸಿದ ಹೋರಾಟ, ಅದರಲ್ಲಿ ಪಡೆದ ಯಶಸ್ಸನ್ನು ಅವರು ವಿವರಿಸಿದರು. ಸುಮಾರು 9 ವರ್ಷಗಳಲ್ಲಿ ತಾನು 100 ಶಾಖೆಗಳನ್ನು ಮಾತ್ರ ತೆರೆದಿದ್ದು, ಈ ಅವಧಿಯಲ್ಲಿ ಬ್ಯಾಂಕ್ ಸರ್ವಾಂಗೀಣ ಪ್ರಗತಿ ಸಾಧಿಸಿ, ಖಾಸಗಿ ಬ್ಯಾಂಕ್‌ಗಳಲ್ಲಿ ಅಗ್ರಸ್ಥಾನಕ್ಕೇರಿತು ಎಂದರು.

ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್, ಸಿಂಡಿಕೇಟ್ ಬ್ಯಾಂಕಿನ ಜನರಲ್ ಮ್ಯಾನೇಜರ್ ಸತೀಶ್ ಕಾಮತ್, ಟ್ಯಾಪ್ಮಿಯ ಡೀನ್ ಡಾ.ಸೈಮನ್ ಜೋರ್ಜ್ ಶುಭಾಶಂಸನೆಯ ಮಾತುಗಳನ್ನಾಡಿದರು. ಕೆ.ಕೆ.ಪೈ ಫೌಂಡೇಷನ್‌ನ ಅಧ್ಯಕ್ಷ ಟಿ.ಸತೀಶ್ ಯು.ಪೈ ಸನ್ಮಾನಿಸಿದರು. 

ಟ್ರಸ್ಟ್‌ನ ಕಾರ್ಯನಿರ್ವಾಹಕ ಟ್ರಸ್ಟಿ ಕೆ.ಎಂ.ಉಡುಪ ಸ್ವಾಗತಿಸಿದರೆ, ಕಾರ್ಯದರ್ಶಿಡಾ.ಕೆ.ಕೆ.ಅಮ್ಮಣ್ಣಾಯ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಬಿವಿಟಿಯ ಸಿಇಒ ಮನೋಹರ್ ಕಟ್ಗೇರಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News