ಬಿಜೆಪಿಯ ಇಬ್ಬಿಬ್ಬರು ನಾಯಕರ ರಾಜ್ಯ ಭೇಟಿಯಿಂದ ಕಾಂಗ್ರೆಸ್‌ಗೆ ಲಾಭವೇ: ಆಸ್ಕರ್ ಪ್ರಶ್ನೆ

Update: 2018-02-17 16:14 GMT

ಉಡುಪಿ, ಫೆ.17: ರಾಹುಲ್ ಗಾಂಧಿ ರಾಜ್ಯಕ್ಕೆ ಬರುವುದರಿಂದ ಬಿಜೆಪಿಯ ವರಿಗೆ ಲಾಭ ಆಗುವುದಾದರೆ, ಬಿಜೆಪಿಯ ಇಬ್ಬಿಬ್ಬರು ನಾಯಕರು ರಾಜ್ಯಕ್ಕೆ ಬರುವುದರಿಂದ ನಮಗೆ ಪ್ರಯೋಜನ ಆಗಬೇಕಲ್ಲವೇ ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಪ್ರಶ್ನಿಸಿದ್ದಾರೆ.

ರಾಹುಲ್ ಗಾಂಧಿ ರಾಜ್ಯಕ್ಕೆ ಬರುವುದರಿಂದ ಬಿಜೆಪಿಗೆ ಲಾಭ ಎಂಬ ಬಿಜೆಪಿ ಮುಖಂಡರ ಟೀಕೆಗೆ ಅವರು ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಈ ರೀತಿ ಪ್ರತಿಕ್ರಿಯಿಸಿದರು.

ರಾಜ್ಯದಲ್ಲಿ ರಾಹುಲ್ ಗಾಂಧಿಗೆ ಅಭೂತಪೂರ್ವ ಬೆಂಬಲ ದೊರೆತಿದೆ. ರಾಜ್ಯ ಸರಕಾರದ ಕೆಲಸ ಜನರ ಮನ ಮುಟ್ಟಿದೆ ಹಾಗೂ ಅಭಿವೃದ್ಧಿ ಕಾರ್ಯ ಹೃದಯ, ಕರುಳನ್ನು ತಲುಪಿದೆ ಎಂಬುದು ರಾಹುಲ್ ಗಾಂಧಿಗೆ ಇದರಿಂದ ಗೊತ್ತಾಗಿದೆ ಎಂದು ಅವರು ತಿಳಿಸಿದರು.

ರಾಹುಲ್ ಗಾಂಧಿ ಕರ್ನಾಟಕದಾದ್ಯಂತ ಪ್ರವಾಸ ಮಾಡುವ ಬಗ್ಗೆ ಮಾತ ನಾಡಿದ ಅವರು, ವಿಪಕ್ಷಗಳು ಟೀಕೆ ಮಾಡುತ್ತಲೆ ಇರಲಿ. ನಮ್ಮ ನಾಯಕರು ಅವರ ಕೆಲಸ ಮಾಡುತ್ತಿರುತ್ತಾರೆ. ಮಾರ್ಚ್ ತಿಂಗಳಲ್ಲಿ ರಾಹುಲ್ ಗಾಂಧಿ ಕರಾವಳಿಯಲ್ಲಿ ಪ್ರವಾಸ ಮಾಡಲಿದ್ದಾರೆ. ಅವರ ಪ್ರವಾಸ ದಿನಾಂಕ ಇನ್ನೂ ನಿಗದಿಯಾಗಿಲ್ಲ. ರಾಹುಲ್ ಗಾಂಧಿ ದೇವಸ್ಥಾನ ಭೇಟಿ ಬಗ್ಗೆ ಟೀಕಿಸುವುದು ವಿಪಕ್ಷಗಳ ಕೆಲಸ ಎಂದರು.

ಅಮಿತ್ ಶಾ ನೇತೃತ್ವದಲ್ಲಿ ಮೀನುಗಾರರ ಸಮಾವೇಶ ನಡೆಸುವ ಬಗ್ಗೆ ಕೇಳಿದ ಪ್ರಶ್ನೆಗೆ ಕರಾವಳಿಯ ಮೀನುಗಾರರು ಕಷ್ಟದಲ್ಲಿದ್ದಾರೆ. ಹಾಗಾಗಿ ಬಿಜೆಪಿಯವರು ಸಮಾವೇಶ ಮಾಡುವುದು ಒಳ್ಳೆಯದು. ಮೀನುಗಾರರಿಗೆ ಕೇಂದ್ರ ಸರಕಾರ ಸಂಪೂರ್ಣ ಸಹಕಾರ ಕೊಡಬೇಕು ಎಂದು ಹೇಳಿದರು.
ಕಾರ್ಕಳ ವಿಧಾನ ಕ್ಷೇತ್ರದಲ್ಲಿ ವೀರಪ್ಪ ಮೊಲಿ ಮಗನಿಗೆ ಟಿಕೆಟ್ ನೀಡುವ ಕುರಿತ ಪ್ರಶ್ನೆಗೆ ಉತ್ತರಿಸಿದ ಆಸ್ಕರ್, ಪಕ್ಷ ತೆಗೆದುಕೊಳ್ಳುವ ನಿರ್ಧಾರದ ಸಂದರ್ಭ ದಲ್ಲಿ ಈ ವಿಚಾರವನ್ನು ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News