ಅಮಿತ್ ಶಾ ಕೋಮುದ್ವೇಷ ಬಿಟ್ಟು ಸತ್ಯ ಮಾತನಾಡಲಿ: ಗುಂಡೂರಾವ್

Update: 2018-02-17 16:16 GMT

ಉಡುಪಿ, ಫೆ.17: ಅಮಿತ್ ಶಾ ಈಗಾಗಲೇ ರಾಜ್ಯಕ್ಕೆ ಮೂರು ನಾಲ್ಕು ಬಾರಿ ಬಂದು ಹೋಗಿದ್ದಾರೆ. ಈ ಬಾರಿ ಬಂದವರು ಕೋಮು ದ್ವೇಷ, ಜನರ ಮನಸ್ಸಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡದೆ ಸ್ವಲ್ಪ ಸತ್ಯವನ್ನಾದರೂ ಮಾತನಾಡಲಿ. ದೇಶದ ಸಮಸ್ಯೆಗಳಿಗೆ ಕೇಂದ್ರ ಸರಕಾರದ ಯಾವ ರೀತಿಯಲ್ಲಿ ಸ್ಪಂದನೆ ಮಾಡಿದೆ ಎಂಬುದರ ಬಗ್ಗೆ ಜನರಿಗೆ ಹೇಳಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರದ ಬಗ್ಗೆ ಸುಳ್ಳು ಆರೋಪ ಮಾಡುವುದನ್ನು ಬಿಟ್ಟು ನಿಜವಾದ ವಿಷಯ ಗಳ ಬಗ್ಗೆ ಚರ್ಚೆ ಮಾಡಿದರೆ ಸ್ವಾಗತ ಮಾಡಬಹುದು. ಅಮಿತ್ ಶಾ ಜವಾ ಬ್ದಾರಿಯುತವಾಗಿ ಮಾತನಾಡಬೇಕು. ಸತ್ಯಾಂಶ ಜನರ ಮುಂದೆ ಇಡಬೇಕು. ಹೆದರಿಸಿ ಬೆದರಿಸುವ ರಾಜಕಾರಣ ಮಾಡಬಾರದು. ರಾಜ್ಯ ಹಾಗೂ ದೇಶದ ಹಿತದೃಷ್ಟಿಯಿಂದ ಅವರು ಮಾತನಾಡಲಿ ಎಂದರು.

ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ ಸರಕಾರಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಆಹ್ವಾನಿಸದೆ ಇರುವುದು ಮೋದಿಯವರ ಸಣ್ಣತನ ತೋರಿಸುತ್ತದೆ. ಶಿಷ್ಟಾಚಾರ ಪಾಲಿಸು ವುದು ಕೇಂದ್ರ ಸರಕಾರದ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

ರಾಹುಲ್ ಗಾಂಧಿ ರಾಜ್ಯ ಪ್ರವಾಸ ಯಶಸ್ವಿಯಾಗಿದೆ. ದೇವಸ್ಥಾನ ಹೋಗಲು ಯಾರ ಗುತ್ತಿಗೆ ಬೇಕಾಗಿಲ್ಲ. ದೇವಸ್ಥಾನಗಳು ಬಿಜೆಪಿಯವರಿಗೆ ಮಾತ್ರ ಗುತ್ತಿಗೆ ಕೊಟ್ಟಿಲ್ಲ. ಹಿಂದೆಯೂ ಕಾಂಗ್ರೆಸ್ ನಾಯಕರು ದೇವಸ್ಥಾನಗಳಿಗೆ ಭೇಟಿ ಮಾಡಿದ್ದಾರೆ. ಕೇದಾರನಾಥಕ್ಕೂ ರಾಹುಲ್ ಪಾದಯಾತ್ರೆ ಮಾಡಿದ್ದಾರೆ. ಹಿಂದೂ ಧರ್ಮ ಬಿಜೆಪಿಗೆ ಮಾತ್ರ ಅಂತ ಭಾವಿಸಿದ್ದಾರೆ. ಬೇರೆ ಪಕ್ಷಗಳಿಗೆ ಹಿಂದು ಧರ್ಮ ಸಂಬಂಧವಿಲ್ಲ ಎಂಬಂತೆ ಮಾತನಾಡುತ್ತಿದ್ದಾರೆ. ಹಿಂದು ಧರ್ಮಕ್ಕೆ ಅಪಚಾರ ಮಾಡುವವರೇ ಬಿಜೆಪಿಯವರು ಎಂದು ಅವರು ಟೀಕಿಸಿದರು.

ಅಮಿತ್ ಶಾ ಕರಾವಳಿ ಪ್ರವಾಸದ ವೇಳೆ ದೇವಸ್ಥಾನ ಭೇಟಿ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಅಮಿತ್ ಶಾ ಮಸೀದಿ, ಚರ್ಚ್‌ಗಳಿಗೂ ಭೇಟಿ ನೀಡಲಿ. ಮೃತಪಟ್ಟ ಹಿಂದೂಗಳ ಮನೆಗೆ ಮಾತ್ರ ಹೋಗದೆ ಮುಸ್ಲಿಮರ ಮನೆಗಳಿಗೂ ಅಮಿತ್ ಶಾ ಹೋಗಲಿ. ಸತ್ತವರ ವಿಚಾರದಲ್ಲಿ ಪಕ್ಷಪಾತ ಯಾಕೆ ಮಾಡಬೇಕು ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News