​ಚುಚ್ಚುಮದ್ದಿನಿಂದ ಮೂರು ತಿಂಗಳ ಮಗು ಮೃತ್ಯು?

Update: 2018-02-17 17:16 GMT

ಕಾಪು, ಫೆ.17: ಕಾಪುವಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚುಚ್ಚುಮದ್ದು ನೀಡಿದ ಬಳಿಕ ಅಳು ನಿಲ್ಲಿಸದ ಮೂರು ತಿಂಗಳ ಮಗುವೊಂದು ಮೃತಪಟ್ಟ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೆಂಕನಿಡಿಯೂರು ಗ್ರಾಮದ ತೊಟ್ಟಂನ ಕೃಷ್ಣ ತಿಂಗಳಾಯ ಅವರ ಮೂರು ತಿಂಗಳ ಮಗು ತನ್ವಿ ಮೃತ ಮಗು. ಅವರ ಪತ್ನಿ ತವರು ಮನೆಯಾದ ಕಾಪು ಪೊಲಿಪು ಗುಡ್ಡೆ ಎಂಬಲ್ಲಿ ವಾಸವಾಗಿದ್ದು, ಫೆ.15ರಂದು ಬೆಳಗ್ಗೆ ಮಗುವಿಗೆ ಕಾಪುವಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚುಚ್ಚುಮದ್ದು ಕೊಡಿಸಿದ್ದರು. ಅದೇ ದಿನ ರಾತ್ರಿಯಿಂದ ಮಗು ವಿಪರೀತ ಕೂಗುತ್ತಿದ್ದು, ಮಗು ಕೂಗುವುದನ್ನು ನಿಲ್ಲಿಸದ ಕಾರಣ ಫೆ.16ರಂದು ಮಧ್ಯಾಹ್ನ ಮಗುವನ್ನು ಕಟಪಾಡಿ ಕ್ಲಿನಿಕ್‌ಗೆ ಕರೆದುಕೊಂಡು ಹೋಗಿ ಪರೀಕ್ಷಿಸಿದರು.

ಅಲ್ಲಿನ ವೈದ್ಯರು ಚುಚ್ಚು ಮದ್ದು ನೀಡಿದ ನೋವಿನಿಂದ ಮಗು ಕೂಗುತ್ತಿರಬಹುದೆಂದು  ಹೇಳಿ ಮದ್ದು ನೀಡಿದ್ದರು. ನಂತರ ಮಗು ಮತ್ತೆ ಕೂಗಾಟ ಜಾಸ್ತಿ ಮಾಡಿ ಅಲ್ಲೇ ನಿದ್ರೆ ಮಾಡಿತು. ಬಳಿಕ ಮಗು ಎಚ್ಚರವಾಗದೆ ಇದ್ದಾಗ ಕೂಡಲೇ ಉಡುಪಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಸಂಜೆ 4.30ರ ಸುಮಾರಿಗೆ ವೈದ್ಯರು ಪರೀಕ್ಷಿಸಿ ಮಗು ಮೃತಪಟ್ಟಿರುವುದಾಗಿ ತಿಳಿಸಿದರು. ಮಗುವಿಗೆ ನೀಡಿದ ಚುಚ್ಚು ಮದ್ದು ಅಥವಾ ಬೇರೆ ಯಾವುದೋ ಕಾರಣದಿಂದ ಮೃತಪಟ್ಟಿರಬಹುದೆಂಬ ಸಂಶಯ ಇರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News