ಯುವತಿಯ ಅತ್ಯಾಚಾರ, ವಂಚನೆ: ಆರೋಪ ಸಾಬೀತು

Update: 2018-02-17 17:33 GMT

ಮಂಗಳೂರು, ಫೆ. 17: ಮದುವೆಯಾಗುವುದಾಗಿ ಯುವತಿಯನ್ನು ನಂಬಿಸಿ, ಅತ್ಯಾಚಾರಗೈದು ಬಳಿಕ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ 6ನೆ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಆರೋಪ ಸಾಬೀತಾಗಿದ್ದು, ನ್ಯಾಯಾಧೀಶರು ಸೋಮವಾರ ಶಿಕ್ಷೆಯನ್ನು ಪ್ರಕಟಿಸಲಿದ್ದಾರೆ.

ಮಂಗಳೂರಿನ ಜ್ಯೋತಿನಗರ ನಿವಾಸಿ ಸತೀಶ್ (26) ಅಪರಾಧಿ ಎಂದು ಗುರುತಿಸಲಾಗಿದೆ.

ಕಡಂದಲೆಯ 22 ವರ್ಷ ವಯಸ್ಸಿನ ಯುವತಿಯೊಂದಿಗೆ ಸತೀಶನಿಗೆ ಮೊಬೈಲ್ ಸಂಪರ್ಕದಿಂದ ಪರಿಚಯವಾಗಿತ್ತು. 2014 ಡಿ.17ರಂದು ಯುವತಿ ಚಿಕ್ಕಮ್ಮನ ಮನೆಗೆ ಹೋಗಿ ಹಿಂದಿರುಗುತ್ತಿದ್ದ ಸಂದರ್ಭ ಸತೀಶ್ ಮನೆಗೆ ಬಿಡುವುದಾಗಿ ಹೇಳಿ ಯುವತಿಯನ್ನು ಬೈಕ್‌ನಲ್ಲಿ ಕುಳ್ಳಿರಿಸಿ ಮನೆಯ ಬಳಿಯ ಗದ್ದೆಗೆ ಕರೆದೊಯ್ದು ವಿವಾಹವಾಗುವುದಾಗಿ ನಂಬಿಸಿ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದನೆಂದು ಆರೋಪಿಸಲಾಗಿತ್ತು. ಅನಂತರ ಯುವತಿ ಸತೀಶ್ ನನ್ನು ವಿವಾಹವಾಗುವಂತೆ ಒತ್ತಾಯಿಸಿದ್ದಳು. ಆದರೆ ಆತ ಆಕೆಯನ್ನು ನಿರ್ಲಕ್ಷಿಸಿ ಬೇರೊಂದು ಯುವತಿಯ ಜತೆ  ವಿವಾಹವಾಗಿದ್ದ. ಈ ವಿಷಯ ಅರಿತ ಆಕೆ 2015 ಜು.11ರಂದು ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸತೀಶ್ ನನ್ನು ಬಂಧಿಸಿದ್ದರು.

ಮೂಡುಬಿದಿರೆ ಪೊಲೀಸ್ ಠಾಣೆಯ ಅಂದಿನ ಇನ್‌ಸ್ಪೆಕ್ಟರ್ ಅನಂತ ಪದ್ಮನಾಭ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. 40 ದಿನ ನ್ಯಾಯಾಂಗ ಬಂಧನದಲ್ಲಿದ್ದ ಸತೀಶ್ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದ. ಇದೀಗ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 19 ಸಾಕ್ಷಿ ಹಾಗೂ 24 ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ವೈದ್ಯರು, ಯುವತಿಯ ಹೆತ್ತವರು ಹೇಳಿದ ಸಾಕ್ಷಿ ಆರೋಪ ಸಾಬೀತಾಗಲು ಕಾರಣವಾಗಿದೆ. ನ್ಯಾಯಾಧೀಶ ಡಿ.ಟಿ. ಪುಟ್ಟರಂಗ ಸ್ವಾಮಿ ಅವರು ತೀರ್ಪು ಪ್ರಕಟಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಜುಡಿತ್ ಒ.ಎಂ.ಕ್ರಾಸ್ತಾ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News