ಸೋಮವಾರ ದ.ಕ. ಜಿಲ್ಲೆಗೆ ಅಮಿತ್ ಶಾ: ಕಾರ್ಯಕ್ರಮಗಳ ವಿವರ

Update: 2018-02-18 13:59 GMT

ಮಂಗಳೂರು, ಫೆ. 18: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಫೆ. 19ರಂದು ಮಧ್ಯಾಹ್ನ 3 ಗಂಟೆಗೆ ಹೊಸದಿಲ್ಲಿಯಿಂದ ವಿಮಾನದ ಮೂಲಕ ಮಂಗಳೂರಿಗೆ ಹೊರಡಲಿದ್ದು, ಸಂಜೆ 5:30ಕ್ಕೆ ಅವರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಕೆಂಜಾರುನಲ್ಲಿ  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನು ಸ್ವಾಗತಿಸಲು ನಿರ್ಧರಿಸಲಾಗಿದೆ.

ಅಮಿತ್ ಶಾ ಅವರು ಸಂಜೆ 6 ಗಂಟೆಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೊರಡಲಿದ್ದಾರೆ. ರಾತ್ರಿ 8:15ಕ್ಕೆ ಸುಬ್ರಹ್ಮಣ್ಯ ತಲುಪಲಿದ್ದು, ರಾತ್ರಿ ಅಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. ಫೆ. 20ರಂದು ದೇವರ ದರ್ಶನ ಪಡೆದು ಬೆಳಗ್ಗೆ 9:15ಕ್ಕೆ ಕುಕ್ಕೆ ಸುಬ್ರಹ್ಮಣ್ಯದಿಂದ ಹೊರಟು 10:15ಕ್ಕೆ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ‘ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ’ ಎಂಬ ವಿಷಯಲ್ಲಿ ರಾಷ್ಟ್ರೀಯ ಅಧ್ಯಕ್ಷರು ಮಾತನಾಡಲಿದ್ದಾರೆ. ಮಧ್ಯಾಹ್ನ 12:30ಕ್ಕೆ ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಕ್ಷೇತ್ರಗಳ ‘ನವಶಕ್ತಿ’ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಸುರತ್ಕಲ್‌ಗೆ ತರಳಿ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿರುವ ದೀಪಕ್ ರಾವ್ ಅವರ ಮನೆಗೆ ಭೇಟಿ ನೀಡಲಿದ್ದಾರೆ. ಅನಂತರ ಅವರು ಉಡುಪಿಯ ಮಲ್ಪೆಯಲ್ಲಿ ನಡೆಯಲಿರುವ ‘ಮೀನುಗಾರರ ಸಮಾವೇಶ’ ಭಾಗವಹಿಸಲಿದ್ದಾರೆ.

ಅಮಿತ್ ಶಾ ಭೇಟಿಯಿಂದ ಕಾಂಗ್ರೆಸ್‌ಗೆ ಭೀತಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಜಿಲ್ಲೆಗೆ ಭೇಟಿ ನೀಡುವುದರಿಂದ ಕಾಂಗ್ರೆಸ್‌ಗೆ ಭೀತಿ ಶುರುವಾಗಿದೆ. ಈಗಾಗಲೇ ಐದು ವರ್ಷಗಳ ಆಡಳಿತದಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಸೃಷ್ಟಿಯಾಗಿದ್ದು, ಕಾಂಗ್ರೆಸ್ ನಾಯಕರಿಗೆ ಸೋಲಿನ ಭೀತಿ ಆವರಿಸಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮಿತ್ ಶಾ ಅವರ ಭೇಟಿಯಿಂದ ಭೀತಿಗೊಳಗಾಗಿರುವ ಕಾಂಗ್ರೆಸ್ ನಾಯಕರು ಬೇಜವಾಬ್ದಾರಿಯುತ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿ ನಾಯಕರು ಹೋದಲ್ಲೆಲ್ಲಾ ಕೋಮು ಗಲಭೆಗಳು ಆಗುತ್ತಿವೆ ಎಂಬ ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಅವಧಿಯಲ್ಲೇ ಹೆಚ್ಚು ಕೋಮುಗಲಭೆಗಳು, ಗ್ಯಾಂಗ್‌ವಾರ್‌ಗಳು ನಡೆದಿವೆ ಎಂದು ತಿರುಗೇಟು ನೀಡಿದರು.

ಧರಂ ಸಿಂಗ್ ಅವರು ಮುಖ್ಯಮಂತ್ರಿರಾಗಿದ್ದ ಮತ್ತು ರಮಾನಾಥ ರೈ ಅವರು ಗೃಹ ಸಚಿವರಾಗಿದ್ದ ಅವಧಿಯಲ್ಲಿ ರಾಜ್ಯದಲ್ಲಿ ಕೋಮುಗಲಭೆಗಳು ನಡೆದಿವೆ. ಯು.ಟಿ.ಖಾದರ್ ಅವರು ಸಚಿವರಾಗಿದ್ದರೂ ಜಿಲ್ಲೆಯಲ್ಲಿ ಕೋಮು ಗಲಭೆಗಳು, ಗ್ಯಾಂಗ್‌ವಾರ್‌ಗಳು, ಹತ್ಯೆಗಳು ನಡೆದಿವೆ. ಜೈಲ್‌ನಲ್ಲಿ ಡಬಲ್ ಮರ್ಡರ್, ಫರಂಗಿಪೇಟೆಯಲ್ಲಿ ಡಬಲ್ ಮರ್ಡರ್, ದಾರಿಯಲ್ಲಿ ಹೋಗುವವರಿಗೆ ಹಲ್ಲೆಗಳು ನಡೆದಿವೆ. ಆದ್ದರಿಂದ ಕಾಂಗ್ರೆಸ್ ನಾಯಕರು ಜವಾಬ್ದಾರಿಯುತ ಹೇಳಿಕೆಗಳನ್ನು ನೀಡಲಿ ಎಂದು ನಳಿನ್ ಸಲಹೆ ನೀಡಿದರು.

ರಾಜ್ಯದಲ್ಲಿ ಚುನಾವಣಾ ಪೂರ್ವ ಸಿದ್ಧತೆ ಆರಂಭಗೊಂಡಿದೆ. ಪಕ್ಷವನ್ನು ಇನ್ನಷ್ಟು ಬಲಪಡಿಸುವುದು ಮತ್ತು ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸುವ ಉದ್ದೇಶದಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಮಂಗಳೂರಿಗೆ ಆಗಮಿಸಲಿದ್ದಾರೆ. ಕರಾವಳಿಯಿಂದಲೇ ಅವರ ರಾಜ್ಯ ಪ್ರವಾಸ ಆರಂಭಗೊಳ್ಳಲಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ವಿಧಾನಪರಿಷತ್ ಮಾಜಿ ಸದಸ್ಯ ಕೆ.ಮೋನಪ್ಪ ಭಂಡಾರಿ, ಪದಾಧಿಕಾರಿಗಳಾದ ಡಾ.ವೈ.ಭರತ್ ಶೆಟ್ಟಿ, ಕಿಶೋರ್ ರೈ, ರವಿಶಂಕರ ಮಿಜಾರು, ವೇದವ್ಯಾಸ ಕಾಮತ್, ಸುದರ್ಶ ಮೂಡುಬಿದಿರೆ, ಜಿತೇಂದ್ರ ಕೊಟ್ಟಾರಿ, ಹರಿಕೃಷ್ಣ ಬಂಟ್ವಾಳ, ಪೂಜಾ ಪೈ, ಈಶ್ವರ ಕಟೀಲ್, ಶೋಭೇಂದ್ರ ಸಸಿಹಿತ್ಲು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News