ಮಂಗಳೂರು: ಕೊಡವ ಸ್ಟೂಡೆಂಟ್ ಅಸೋಸಿಯೇಷನ್ 18 ನೇ ವಾರ್ಷಿಕೋತ್ಸವ
ಮಂಗಳೂರು,ಫೆ.18: ಕೊಡವ ಸ್ಟೂಡೆಂಟ್ ಅಸೋಸಿಯೇಷನ್ ದಕ್ಷಿಣ ಕನ್ನಡ ಹಾಗೂ ಉಡುಪಿ ಇದರ 18 ನೇ ವಾರ್ಷಿಕ ಸಮಾರಂಭ ಮಂಗಳೂರಿನ ಅಲೋಶಿಯಸ್ ಪ್ರೈಮರಿ ಸಭಾಂಗಣದಲ್ಲಿ ನಡೆಯಿತು.
ಕೊಡವ ಸ್ಟೂಡೆಂಟ್ ಅಸೋಸಿಯೇಶನ್ ಅಧ್ಯಕ್ಷ ಒಡಿಯಂಡ ಗಗನ್ ಪೂಣಚ್ಚ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜೀರ ಬಿ. ಅಯ್ಯಪ್ಪ ಮಾತನಾಡಿ, ಇಂದಿನ ಮಕ್ಕಳು ಕೊಡವರ ಆಚಾರ ವಿಚಾರವನ್ನು ಮುಂದುವರೆಸಿಕೊಂಡು ಹೋಗುವ ಅಗತ್ಯವಿದೆ ಎಂದರು. ಸಣ್ಣ ವಯಸ್ಸಿನಲ್ಲಿ ಕಲಿತ ಪಾಠ ಕೊನೆಯವರೆಗೂ ನಮ್ಮೊಂದಿಗೆ ಇರುತ್ತದೆ. ಆದರಿಂದ ಮಕ್ಕಳಿಗೆ ಮೂಲ ಆಚಾರ ವಿಚಾರವನ್ನು ಸಣ್ಣ ವಯಸ್ಸಿನಲ್ಲಿಯೇ ತಿಳಿ ಹೇಳುವ ಕಾರ್ಯವಾಗಬೇಕು ಎಂದು ತಿಳಿಸಿದರು.
ನಾವು ಇಂದು ಸಾಹಿತ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾದ ಅಗತ್ಯವಿದೆ ಎಂದ ಅಯ್ಯಪ್ಪ, ಮಕ್ಕಳಲ್ಲಿ ನಾಯಕತ್ವದ ಕೌಶಲ್ಯ ಬೆಳೆಯಬೇಕಿದ್ದು, ಆ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕೊಡವರು ಕೊಡಗನ್ನು ಬಿಟ್ಟು ಹೊರಹೋದರೂ ಕೂಡ ಕೊಡಗಿನ ಪದ್ಧತಿ, ಪರಂಪರೆ ಆಚಾರ ವಿಚಾರವನ್ನು ಮರೆಯಬಾರದು. ಕೊಡವರಿಗೆ ತಮ್ಮದೇ ಆದ ಸಾಂಸ್ಕೃತಿಕ ಹಿನ್ನೆಲೆಯಿದ್ದು, ಅದನ್ನು ಉಳಿಸಿಕೊಂಡು ಹೋಗಬೇಕಿದೆ. ಆ ನಿಟ್ಟಿನಲ್ಲಿ ಕೊಡವ ಯುವ ಪೀಳಿಗೆ ಮುಂದಾಗಬೇಕು ಎಂದು ಕರೆ ನೀಡಿದರು.
ವಕೀಲರಾದ ಸೋಮೆಯಂಡ ಪಿ ಚೆಂಗಪ್ಪ ಮಾತನಾಡಿ, ಕೊಡವರಿಗೆ ಮಾತ್ರ ಇಂದು ಕೋವಿ ಹಕ್ಕಿಗೆ ವಿನಾಯಿತಿ ನೀಡಲಾಗಿದೆ. ಇಂಹತ ಯಾವ ಅವಕಾಶವು ಬೇರೆ ಜನಾಂಗದವರಿಗೆ ಇಲ್ಲ. ಕೊಡಗಿನಲ್ಲಿ ಹುಟ್ಟಿರುವುದು ನಮ್ಮ ಹೆಮ್ಮೆ. ನಾವು ಸಾಯುವವರೆಗೂ ಕೊಡವರಾಗಿಯೇ ಇದ್ದು, ಕೊಡವಾಮೆ ಉಳಿಸಲು ಶ್ರಮಿಸಬೇಕು ಎಂದರು.
ವೇದಿಕೆಯಲ್ಲಿ ಕೊಡವ ಸ್ಟೂಡೆಂಟ್ ಅಸೋಸಿಯೇಶನ್ ಉಪಾಧ್ಯಕ್ಷೆ ಮುಕ್ಕಾಟೀರ ನೇಹಾ ಬೋಜಮ್ಮ, ಕ್ಯಾಲೇಟಿರ ಪವಿತ್ ಪೂವಯ್ಯ ಮತ್ತಿತರರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನೆಲಮಕ್ಕಡ ಕುಂಕುಮ್ ಪೂವಮ್ಮ (ಬಾಸ್ಕೆಟ್ ಬಾಲ್), ಕ್ಯಾಡಮಾಡ ದೀಪ್ತಿ ಹಾಗೂ ತೃಪ್ತಿ (ಫುಟ್‍ಬಾಲ್), ತಾಪಂಡ ನಿಶಾ (ಬ್ಯಾಡ್ಮಿಂಟನ್), ಪರದಂಡ ಪ್ರಜ್ವಲ್ (ಹಾಕಿ), ಚೇಂದ್ರಿಮಾಡ ಭೂಮಿಕಾ (ಮಿಸ್ ಕರ್ನಾಟಕ ಫೈನಲಿಸ್ಟ್), ಕಾವೇರಿ ಸುಬ್ಬಯ್ಯ (ಮಿಸ್ ಕರ್ನಾಟಕ ಸ್ಪರ್ಧಿ) ಇವರುಗಳನ್ನು ಸನ್ಮಾನಿಸಲಾಯಿತು.
ವಾರ್ಷಿಕ ಸಮಾರಂಭದ ಅಂಗವಾಗಿ ನಡೆದ ಮಿಸ್ಟರ್ ಕೆಎಎಸ್‍ಎ ಸ್ಪರ್ಧೆಯಲ್ಲಿ ಮರಡ ಪ್ರೇಮ್ ಪೊನ್ನಣ್ಣ, ಮಿಸ್ ಕೆಎಎಸ್‍ಎ ಸ್ಫರ್ಧೆಯಲ್ಲಿ ಕಾಡೇಮಾಡ ಶೀತಲ್ ಪ್ರಶಸ್ತಿ ಪಡೆದುಕೊಂಡರು. ಕಾರ್ಯಕ್ರಮದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಓಡಿಯಂಡ ಗಗನ್ ಪೂಣಚ್ಚ ಸ್ವಾಗತಿಸಿದರು. ಮುಕ್ಕಾಟೀರ ನೇಹಾ ದೇಚಮ್ಮ ವಾರ್ಷಿಕ ವರದಿ ವಾಚಿಸಿದರು. ವಂಶಿ ಗಣಪತಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.