ಫೆ.20-21 :ಅಮಿತ್ ಶಾ ಉಡುಪಿ ಜಿಲ್ಲೆಗೆ

Update: 2018-02-18 14:23 GMT

ಉಡುಪಿ, ಫೆ.18: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಫೆ.20ರಂದು ಉಡುಪಿ ಜಿಲ್ಲೆಗೆ ಪ್ರಥಮ ಬಾರಿಗೆ ಆಗಮಿಸಲಿದ್ದು, ಅಂದು ಸಂಜೆ 4ಗಂಟೆಗೆ ಮಲ್ಪೆ ಕಡಲ ತೀರದಲ್ಲಿ ಮೀನುಗಾರರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಈ ಸಮಾವೇಶದಲ್ಲಿ ದ.ಕ., ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ 35000 ಮೀನುಗಾರರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ ಮೀನುಗಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಮತ್ತು ಸಿಆರ್‌ಝೆಡ್ ಸಮಸ್ಯೆ ಕುರಿತ ಮನವಿಯನ್ನು ಮೀನುಗಾರ ಮುಖಂಡರು ಅಮಿತ್ ಶಾ ಅವರಿಗೆ ಸಲ್ಲಿಸಲಿದ್ದಾರೆ ಎಂದರು.

ಮಂಗಳೂರಿನಿಂದ ಸಂಜೆ 4ಗಂಟೆಗೆ ಆಗಮಿಸುವ ಅಮಿತ್ ಶಾರನ್ನು ಹೆಜಮಾಡಿಯಲ್ಲಿ ಪಕ್ಷದ ವತಿಯಿಂದ ಸ್ವಾಗತಿಸಿ, ಯುವ ಮೋರ್ಚಾ ನೇತೃತ್ವದ ಬೈಕ್ ರ್ಯಾಲಿಯಲ್ಲಿ ಸಮಾವೇಶಕ್ಕೆ ಬರ ಮಾಡಿಕೊಳ್ಳಲಾಗುವುದು. ಸಂಜೆ ಏಳು ಗಂಟೆಗೆ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ, ರಾತ್ರಿ ಉಡುಪಿ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಮಾಡಲಿದ್ದಾರೆ.

ಫೆ.21ರಂದು ಬೆಳಗ್ಗೆ 10ಗಂಟೆಗೆ ಉಡುಪಿ ಮತ್ತು ದ.ಕ. ಜಿಲ್ಲೆಗಳ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಪ್ರಮುಖರ ಸಂವಾದ ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಗವಹಿಸಲಿರುವರು. ಈ ಸಂದರ್ಭದಲ್ಲಿ ಬಿಜೆಪಿ ವೆಬ್ ಸೈಟ್‌ನ್ನು ಅವರು ಉದ್ಘಾಟಿಸಲಿರುವರು. ನಂತರ ಶಿವಮೊಗ್ಗ ಮತ್ತು ಮಂಗಳೂರು ವಿಭಾಗದ ಶಕ್ತಿ ಕೇಂದ್ರದ ಪ್ರಮುಖರ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ ನಂತರ ಉತ್ತರ ಕನ್ನಡ ಪ್ರವಾಸವನ್ನು ಮುಂದುವರೆಸಲಿದ್ದಾರೆ.

ಅಮಿತ್ ಶಾ ಜೊತೆ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲು, ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಭಾಗವಹಿಸಲಿರುವರು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಸುನೀಲ್ ಕುಮಾರ್, ಮುಖಂಡರಾದ ಉದಯ ಕುಮಾರ್ ಶೆಟ್ಟಿ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ರಘುಪತಿ ಭಟ್, ಲಾಲಾಜಿ ಆರ್.ಮೆಂಡನ್, ಶೀಲಾ ಕೆ.ಶೆಟ್ಟಿ, ಯಶ್ಪಾಲ್ ಸುವರ್ಣ ಮೊದಲಾದವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News