ಪಂಜಾಬ್ ನ್ಯಾಶನಲ್ ಬ್ಯಾಂಕ್ ವಂಚನೆ: ಬಂಧಿತ ಅಧಿಕಾರಿಗಳು ಬಾಯ್ಬಿಟ್ಟ ಸ್ಪೋಟಕ ಮಾಹಿತಿಯೇನು ಗೊತ್ತಾ ?

Update: 2018-02-18 14:42 GMT

ಹೊಸದಿಲ್ಲಿ, ಫೆ. 18: ಪಂಜಾಬ್ ನ್ಯಾಶನಲ್ ಬ್ಯಾಂಕ್ ವಂಚನೆಗೆ ಸಂಬಂಧಿಸಿ ಬಂಧಿತರಾಗಿರುವ ಬ್ಯಾಂಕ್ ಅಧಿಕಾರಿಗಳು, ಎಲ್‌ಒಯು (ಲೆಟರ್ ಆಫ್ ಅಂಡರ್‌ಟೇಕಿಂಗ್) ನೀಡಲು ನಿಗದಿತ ಕಮಿಷನ್ ಪಡೆಯಲಾಗುತ್ತಿತ್ತು ಎಂಬ ವಿವರವನ್ನು ಬಹಿರಂಗಪಡಿಸಿದ್ದಾರೆ. ಭಾರತೀಯ ಸಾಲಗಾರರು ವಿದೇಶಿ ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ಪಂಜಾಬ್ ನ್ಯಾಶನಲ್ ಬ್ಯಾಂಕ್‌ನ ಮುಂಬೈ ಶಾಖೆ ಎಲ್‌ಒಯು (ಲೆಟರ್ ಆಫ್ ಅಂಡರ್‌ಟೇಕಿಂಗ್) ನೀಡಿತ್ತು ಎಂದು ಅವರು ತಿಳಿಸಿದ್ದಾರೆ. ‘‘ಮಂಜೂರು ಮಾಡುವ ಮೊತ್ತವನ್ನು ಅವಲಂಬಿಸಿ ಎಲ್‌ಒಯುಗೆ ಶೇಕಡುವಾರು ಮೊತ್ತ ನಿಗದಿ ಮಾಡಲಾಗುತ್ತಿತ್ತು.’’ ಎಂದು ಬಂಧಿತ ಅಧಿಕಾರಿ ತಿಳಿಸಿದ್ದಾರೆ ಎಂದು ಸಿಬಿಐ ಹೇಳಿದೆ. ಎಲ್‌ಒಯುಗೆ ಪ್ರತಿಯಾಗಿ ನೀಡುವ ಕಮಿಷನ್ ಅನ್ನು ಪಂಜಾಬ್ ನ್ಯಾಶನಲ್ ಬ್ಯಾಂಕ್‌ನ ಕೆಲವು ಉದ್ಯೋಗಿಗಳ ನಡುವೆ ಹಂಚಲಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ. ಈ ವಂಚನೆಯಲ್ಲಿ ನೀರವ್ ಮೋದಿ, ಮೆಹುಲ್ ಚೋಕ್ಸಿ ಸಹಿತ ಭಾಗಿಯಾಗಿರುವ ಹಾಗೂ ಮೌನ ಸಮ್ಮತಿ ನೀಡಿರುವ ಬ್ಯಾಂಕ್‌ನ ಉದ್ಯೋಗಿಗಳು ಹಾಗೂ ಹೊರಗಿನವರ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ಆದಾಗ್ಯೂ, ಬಂಧಿತ ಆರೋಪಿಗಳು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News