200 ನಕಲಿ ಕಂಪೆನಿಗಳನ್ನು ಪತ್ತೆಹಚ್ಚಿದ ಇಡಿ, ಐಟಿ ಇಲಾಖೆ!

Update: 2018-02-18 14:50 GMT

ಹೊಸದಿಲ್ಲಿ,ಫೆ.18: ವಜ್ರ ವ್ಯಾಪಾರಿ ನೀರವ್ ಮೋದಿ, ಆತನ ಸಂಬಂಧಿಗಳು, ಉದ್ಯಮ ಪಾಲುದಾರ ಮೇಹುಲ್ ಚೋಸ್ಕಿ ಮತ್ತು ಇತರರು ಭಾಗಿಯಾಗಿರುವ 11,400 ಕೋ.ರೂ.ಗಳ ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‌ಬಿ) ವಂಚನೆ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ(ಇಡಿ) ಮತ್ತು ಆದಾಯ ತೆರಿಗೆ ಇಲಾಖೆ ಕನಿಷ್ಠ 200 ನಕಲಿ ಕಂಪನಿಗಳು ಮತ್ತು ಬೇನಾಮಿ ಆಸ್ತಿಗಳನ್ನು ತೀವ್ರ ಪರಿಶೀಲನೆ ಗೊಳಪಡಿಸಿವೆ.

ನಾಲ್ಕನೆಯ ದಿನವಾದ ರವಿವಾರವೂ ಮೋದಿ, ಚೋಸ್ಕಿ ಮತ್ತು ಅವರ ಕಂಪನಿಗಳ ವಿರುದ್ಧ ತನ್ನ ಶೋಧ ಕಾರ್ಯಾಚರಣೆಗಳನ್ನು ಮುಂದುವರಿಸಿದ ಇಡಿ, ಅಕ್ರಮ ಹಣ ವಹಿವಾಟು ತಡೆ ಕಾಯ್ದೆ(ಪಿಎಂಎಲ್‌ಎ)ಯಡಿ ಕನಿಷ್ಠ ಎರಡು ಡಝನ್ ಸ್ಥಿರಾಸ್ತಿಗಳ ಜಪ್ತಿಗೆ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಇಡಿ ರವಿವಾರ ಚಿನ್ನಾಭರಣ ಮಳಿಗೆಗಳು ಮತ್ತು ಕಾರ್ಯಗಾರಗಳು ಸೇರಿದಂತೆ ದೇಶಾದ್ಯಂತ ಕನಿಷ್ಠ 45 ಸ್ಥಳಗಳಲ್ಲಿ ದಾಳಿಗಳನ್ನು ನಡೆಸಿದೆ.

ಆರೋಪಿಗಳಿಗೆ ಸೇರಿದ 29 ಆಸ್ತಿಗಳನ್ನು ಆದಾಯ ತೆರಿಗೆ ಇಲಾಖೆಯು ತಾತ್ಕಾಲಿಕವಾಗಿ ಸ್ವಾಧೀನಪಡಿಸಿಕೊಂಡಿದ್ದು, ಇಡಿ ಪಿಎಂಎಲ್‌ಎ ಅಡಿ ಅವುಗಳ ಪರಿಶೀಲನೆಯನ್ನು ಕೈಗೊಂಡಿದೆ. ಈ ಕಾಯ್ದೆಯಡಿ ಶೀಘ್ರವೇ ಇನ್ನಷ್ಟು ಆಸ್ತಿಗಳನ್ನು ಜಪ್ತಿ ಮಾಡಲಾಗುವುದು ಎಂದು ತಿಳಿಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಯೋರ್ವರು, ಈ ಬೃಹತ್ ವಂಚನೆಯ ಭಾಗವಾಗಿ ಹಣವನ್ನು ಸ್ವೀಕರಿಸಲು ಬಳಕೆಯಾಗುತ್ತಿದ್ದ ದೇಶದಲ್ಲಿಯ ಮತ್ತು ವಿದೇಶಗಳಲ್ಲಿಯ ಸುಮಾರು 200 ನಕಲಿ ಕಂಪನಿಗಳನ್ನು ಇಡಿ ಮತ್ತು ಐಟಿ ಇಲಾಖೆ ಪತ್ತೆ ಹಚ್ಚಿವೆ ಎಂದರು.

ಅಕ್ರಮ ಹಣದ ವಹಿವಾಟಿಗಾಗಿ ಮತ್ತು ಭೂಮಿ, ಚಿನ್ನ ಹಾಗೂ ಬೆಲೆಬಾಳುವ ಹರಳುಗಳ ರೂಪದಲ್ಲಿ ಬೇನಾಮಿ ಆಸ್ತಿಗಳನ್ನು ಸೃಷ್ಟಿಸಲು ಈ ನಕಲಿ ಕಂಪನಿಗಳ ಬಳಕೆಯಾಗುತ್ತಿತ್ತು ಎಂದು ಶಂಕಿಸಲಾಗಿದ್ದು, ಅದೀಗ ಆದಾಯ ತೆರಿಗೆ ಇಲಾಖೆಯ ತನಿಖೆಯಲ್ಲಿದೆ.

ಪ್ರಕರಣದ ತನಿಖೆಗಾಗಿ ಇಡಿ ಮತ್ತು ಐಟಿ ಇಲಾಖೆ ವಿಶೇಷ ತಂಡಗಳನ್ನು ರಚಿಸಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಈವರೆಗೆ 5,674 ಕೋ.ರೂ.ವೌಲ್ಯದ ವಜ್ರಗಳು, ಚಿನ್ನಾಭರಣಗಳು ಮತ್ತು ಇತರ ಅಮೂಲ್ಯ ಹರಳುಗಳನ್ನು ವಶಪಡಿಸಿಕೊಂಡಿದೆ.

 ಐಟಿ ಇಲಾಖೆಯು ಶನಿವಾರ ತೆರಿಗೆ ವಂಚನೆ ತನಿಖೆಗೆ ಸಂಬಂಧಿಸಿದಂತೆ ಗೀತಾಂಜಲಿ ಜೆಮ್ಸ್, ಅದರ ಪ್ರವರ್ತಕ ಚೋಸ್ಕಿ ಮತ್ತು ಇತರರಿಗೆ ಸೇರಿದ ಒಂಭತ್ತು ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿದೆ. ಮೋದಿ, ಆತನ ಕುಟುಂಬ ಸದಸ್ಯರು ಮತ್ತು ಕಂಪನಿಗಳಿಗೆ ಸೇರಿದ 29 ಆಸ್ತಿಗಳು ಮತ್ತು 105 ಬ್ಯಾಂಕ್ ಖಾತೆಗಳನ್ನೂ ಅದು ಜಪ್ತಿ ಮಾಡಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News