ಅರುಣಾಚಲ ಪ್ರದೇಶ ಸಿಎಂ ವಿರುದ್ಧ ಅತ್ಯಾಚಾರ ಆರೋಪ

Update: 2018-02-18 15:41 GMT

ಹೊಸದಿಲ್ಲಿ, ಫೆ. 18: ಅತ್ಯಾಚಾರ, ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆ ಅಥವಾ ಬಾಲಕಿಗೆ ಕೂಡಲೇ ನ್ಯಾಯ ನೀಡಬೇಕು. ಇಲ್ಲದಿದ್ದರೆ, ಅವರು ವ್ಯಕ್ತಿ, ಸಂಸ್ಥೆಯನ್ನು ಎಂದಿಗೂ ನಂಬಲಾರರು ಎಂದು ಅರುಣಾಚಲದ ಮುಖ್ಯಮಂತ್ರಿ ತೆಮಾ ಖಂಡು ಹಾಗೂ ಇತರ ಇಬ್ಬರಿಂದ 2008 ಜುಲೈನಲ್ಲಿ ಅತ್ಯಾಚಾರಕ್ಕೆ ಒಳಗಾಗಿದ್ದೆ ಎಂದು ಆರೋಪಿಸುತ್ತಿರುವ ಮಹಿಳೆ ಹೇಳಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ಔಪಚಾರಿಕವಾಗಿ ದೂರು ಸಲ್ಲಿಸಿದ ಎರಡು ದಿನಗಳ ಬಳಿಕ ಶನಿವಾರ ಹೊಸದಿಲ್ಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂತ್ರಸ್ತೆ, ‘‘ನಾನು ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ತೆಮಾ ಖಂಡು ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದೇನೆ. ಇದುವರೆಗೆ ನನಗೆ ಪೊಲೀಸರಿಂದಾಗಲಿ, ನ್ಯಾಯಾಲಯದಿಂದಾಗಲಿ ಯಾವುದೇ ಪ್ರತಿಕ್ರಿಯೆ ದೊರಕಿಲ್ಲ. ನ್ಯಾಯಾಲಯ ಹಾಗೂ ಪೊಲೀಸರು ಇದು ಅಸತ್ಯ ಎಂದು ಹೇಳುತ್ತಿದ್ದಾರೆ. ನಾನು ಮತ್ತು ನನ್ನ ವಕೀಲರು ಸರಕಾರೇತರ ಸಂಸ್ಥೆಯೊಂದರ ನೆರವಿನಿಂದ ರಾಷ್ಟ್ರೀಯ ಮಹಿಳಾ ಆಯೋಗ ಸಂಪರ್ಕಿಸಿದೆವು. ಒಂದು ವೇಳೆ ನನಗೆ ಇಲ್ಲಿ ಕೂಡ ನ್ಯಾಯ ಸಿಗದೇ ಇದ್ದರೆ, ನನ್ನಂತಹ ಸಂತ್ರಸ್ತರು ಯಾರನ್ನೂ ನಂಬಲಾರರು’’ ಎಂದಿದ್ದಾರೆ. ‘‘ನಾನು ಸರಿಯಾಗಿದ್ದೇನೆ. ಆದುದರಿಂದ ನನ್ನ ಕೊನೆ ಉಸಿರಿರುವವರೆಗೆ ಹೋರಾಟ ಮಾಡುತ್ತೇನೆ. ಹಣ ಮಾಡಲು ನಾನು ಹೀಗೆ ಮಾಡುತ್ತಿದ್ದೇನೆ ಎಂದು ಹಲವರು ಸಾಮಾಜಿಕ ಜಾಲ ತಾಣಗಳಲ್ಲಿ ಆರೋಪಿಸುತ್ತಿದ್ದಾರೆ. ಆದರೆ, ಕೇವಲ ಹಣದ ಕಾರಣಕಾಗಿ ನಾನು ಯಾರೊಬ್ಬರ ಬದುಕಿನಲ್ಲೂ ಆಟ ಆಡಲಾರೆ. ನಾನು ಯಾಕೆ ನಕಲಿ ದೂರು ನೀಡಬೇಕು. ರಾಷ್ಟ್ರೀಯ ಮಹಿಳಾ ಆಯೋಗ ಇದರ ಬಗ್ಗೆ ಚಿಂತಿಸಬೇಕು ಹಾಗೂ ಕ್ರಮ ತೆಗೆದುಕೊಳ್ಳಬೇಕು’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News