×
Ad

ತಂದೆ, ಚಿಕ್ಕಪ್ಪನ ಕಿರುಕುಳದ ಆರೋಪ: ಮಗ ಆತ್ಮಹತ್ಯೆ

Update: 2018-02-18 21:27 IST

ಶಂಕರನಾರಾಯಣ, ಫೆ.18: ಆಸ್ತಿ ವಿಚಾರದಲ್ಲಿ ತಂದೆ, ಚಿಕ್ಕಪ್ಪನ ಬೆದರಿಕೆ ಹಾಗೂ ಮಾನಸಿಕ ಹಿಂಸೆಯಿಂದ ನೊಂದ ಮಗ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರನ್ನು ಅಲ್ಬಾಡಿ ಗ್ರಾಮದ ತೊನ್ನಾಸೆ ನಿವಾಸಿ ನರಸಿಂಹ ಆಚಾರ್ಯ ಎಂಬವರ ಮಗ ಪ್ರಭಾಕರ ಆಚಾರಿ(32) ಎಂದು ಗುರುತಿಸಲಾಗಿದೆ. ಇವರು ಮರಣ ಪತ್ರ ಬರೆದಿಟ್ಟು, ತಂದೆ ನರಸಿಂಹ ಆಚಾರ್ಯ, ಚಿಕ್ಕಪ್ಪ ಶಂಕರ ಆಚಾರ್ಯ ಹಾಗೂ 9ನೇ ಮೈಲಿಗಲ್ಲಿನ ಚೂರಿ ಶಂಕರ ಎಂಬವರ ಬೆದರಿಕೆ ಹಾಗೂ ಮಾನಸಿಕ ಹಿಂಸೆಯಿಂದ ನೊಂದು ಮನೆಯ ಒಳಗಿನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಹೋದರ ಭಾಸ್ಕರ ಆಚಾರ್ಯ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಈ ಆತ್ಮಹತ್ಯೆಗೆ ಆಸ್ತಿ ವಿವಾದವೇ ಕಾರಣ ಎಂದು ತಿಳಿದು ಬಂದಿದೆ. 2017ರ ಅಕ್ಟೋಬರ್ 3ರಂದು ಇವರ ಪತ್ನಿ ಪವಿತ್ರಾ ಪತಿ ಹಾಗೂ ಮಾವ ಕಿರುಕುಳ ನೀಡುತ್ತಿದ್ದಾರೆಂದು ಮರಣ ಪತ್ರ ಬರೆದಿಟ್ಟು ಇದೇ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಇವರ ಎರಡೂವರೆ ವರ್ಷದ ಹಾಗೂ ಒಂದು ವರ್ಷದ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ನರಸಿಂಹ ಆಚಾರ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News