ಹೆಮ್ಮಾಡಿ: 'ಬಣ್ಣದ ಬೆಸುಗೆ' ಚಿತ್ರಕಲಾ ಸ್ಪರ್ಧೆ ಉದ್ಘಾಟನೆ
ಕುಂದಾಪುರ, ಫೆ.18: ಹೆಮ್ಮಾಡಿಯ ಜ್ಞಾನ ಯುವಜನದ ಆಶ್ರಯದಲ್ಲಿ ಬಣ್ಣದ ಲೋಕದ ಗಾರುಡಿಗ ದಿವಂಗತ ಭೋಜು ಹಾಂಡರ ನೆನಪಿನ ಚಿತ್ರಕಲಾ ಸ್ಪರ್ಧೆ 'ಬಣ್ಣದ ಬೆಸುಗೆ' ಕಾರ್ಯಕ್ರಮವನ್ನು ಹೆಮ್ಮಾಡಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ರವಿವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಂದಾಪುರ ಸಮುದಾಯ ಕಾರ್ಯದರ್ಶಿ ಹಾಗೂ ಶಿಕ್ಷಕ ಸದಾನಂದ ಬೈಂದೂರು ಮಾತನಾಡಿ, ಭೋಜು ಹಾಂಡರ ನೆನಪಲ್ಲೇ ನಾವು ಬಣ್ಣದ ನೆನಪು ಮಾಡಿಕೊಳ್ಳಬೇಕಾಗಿದೆ. ಭಾವಕ್ಕೆ ಬಣ್ಣದ ಲೇಪನ ಮಾಡಿದವರು ಭೋಜ ಹಾಂಡರು. ಈ ಬಣ್ಣದ ಬೆಸುಗೆ ನಿರಂತರ ವಾಗಿ ಮುನ್ನಡೆಯಲಿ ಎಂದು ಹಾರೈಸಿದರು.
ಭೋಜ ಹಾಂಡರು ವೃತ್ತಿಯನ್ನೇ ತನ್ನ ಪ್ರವೃತ್ತಿಯನ್ನಾಗಿಸಿಕೊಂಡವರು. ಬಣ್ಣದ ಹುಡುಕಾಟದಲ್ಲಿ ಏನೋ ಒಂದು ಅವ್ಯಕ್ತವಾದ ಸಂತೋಷ ಅಡಗಿದೆ ಎನ್ನುವುದನ್ನು ತಮ್ಮ ಶಿಷ್ಯಂದಿರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಭೋಜು ಹಾಂಡರು ಕಲೆಯನ್ನು ಪ್ರೀತಿಸುತ್ತಿದ್ದು, ಆ ಕಲೆಯನ್ನು ಎಲ್ಲರಿಗೂ ತಲುಪಿಸ ಬೇಕೆಂಬ ಮಹದಾಸೆ ಇಟ್ಟುಕೊಂಡಿದ್ದರು ಎಂದು ಅವರು ಹೇಳಿದರು.
ಅಧ್ಯಕ್ಷತೆಯನ್ನು ಚಿತ್ರಕಲಾ ಶಿಕ್ಷಕ ಸುರೇಶ ಹೆಮ್ಮಾಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾಪಂ ಸದಸ್ಯ ಆನಂದ ಪಿ.ಎಚ್., ಯೋಗ ಶಿಕ್ಷಕ ಪ್ರವೀಣ್ ಕುಮಾರ್ ಹೆಗ್ಡೆ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಅಶೋಕ ಹಟ್ಟಿಯಂಗಡಿ, ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ಭಂಡಾರಿ, ಭೋಜು ಹಾಂಡರ ಮಕ್ಕಳಾದ ರಾಕೇಶ್ ಹಾಂಡ, ರಾಜೇಶ್ ಹಾಂಡ,ರೂಪಶ್ರೀ ಹಾಂಡ ಉಪಸ್ಥಿತರಿದ್ದರು.
ಜ್ಞಾನ ಯುವಜನ ಸಮಿತಿಯ ಹರೀಶ್ ಹೆಮ್ಮಾಡಿ ಸ್ವಾಗತಿಸಿದರು. ವಿಘ್ನೇಶ್ ಹೆಮ್ಮಾಡಿ ವಂದಿಸಿದರು. ಪತ್ರಕರ್ತ ಶ್ರೀಕಾಂತ ಹೆಮ್ಮಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.
ಪ್ರಾಥಮಿಕ ಮಕ್ಕಳಿಗಾಗಿ ಏರ್ಪಡಿಸಲಾದ ಚಿತ್ರಕಲಾ ಸ್ಪರ್ಧೆಗೆ ಭೋಜು ಹಾಂಡರ ಪುತ್ರ ರಾಕೇಶ್ ಹಾಂಡ ಚಿತ್ರ ಬಿಡಿಸುವುದುರ ಮೂಲಕ ಚಾಲನೆ ನೀಡಿದರು. ಸುಮಾರು 60 ವಿದ್ಯಾರ್ಥಿಗಳು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿ ಸಿದ್ದರು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಶಾಶ್ವತ ಫಲಕ ನೀಡಿ ಗೌರವಿಸಲಾಯಿತು.