ವೈದ್ಯಕೀಯ ವಿದ್ಯಾರ್ಥಿಗಳಿಗೆ ಏಕಾಗ್ರತೆ ಮುಖ್ಯ: ಡಾ.ಚಂದ್ರಶೇಖರ್
ಉಡುಪಿ, ಫೆ.18: ಜ್ಞಾನ ಹಾಗೂ ಕೌಶಲ್ಯ ಇರುವ ವಿದ್ಯಾರ್ಥಿಗಳು ಯಾವ ಕಾಲಕ್ಕೂ ಸಲ್ಲುತ್ತಾರೆ. ವೈದ್ಯಕೀಯ ವಿದ್ಯಾರ್ಥಿಗಳು ಕೆಲಸದಲ್ಲಿ ಏಕಾಗ್ರತೆ ಹಾಗೂ ತಮ್ಮನ್ನು ತೊಡಗಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಉಡುಪಿ ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್.ಚಂದ್ರಶೇಖರ್ ಹೇಳಿದ್ದಾರೆ.
ಉಡುಪಿ ಪ್ರಸಾದ್ ನೇತ್ರಾಲಯದ ನೇತ್ರ ಜ್ಯೋತಿ ಕಾಲೇಜು ಹಾಗೂ ಪ್ಯಾರಾಮೆಡಿಕಲ್ ಸೈನ್ಸೆಸ್ ಇದರ ವಾರ್ಷಿಕೋತ್ಸವ ಸಮಾರಂಭವನ್ನು ಶನಿವಾರ ಉಡುಪಿ ಐಎಂಎ ಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ವೈದ್ಯಕೀಯ ವೃತ್ತಿ ಅತ್ಯುನ್ನತವಾದ ಸೇವೆಯಾಗಿದೆ. ವೈದ್ಯರು ಕಷ್ಟ ಕಾಲದಲ್ಲಿ ಜನರಿಗೆ ದೇವರ ಸ್ವರೂಪಿಗಳು. ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯ ಬಹಳ ಅವಶ್ಯವಾಗಿದ್ದು, ಪದವಿ ಜತೆಗೆ ಕೌಶಲ್ಯವನ್ನು ಅಭಿವೃದ್ಧಿ ಪಡಿಸಿಕೊಳ್ಳಲು ಆದ್ಯತೆ ನೀಡಬೇಕು ಎಂದರು.
ನೇತ್ರ ಜ್ಯೋತಿ ಕಾಲೇಜಿನ ಅಧ್ಯಕ್ಷ ಡಾ.ಕೆ.ಕೃಷ್ಣಪ್ರಸಾದ್, ಭಾರತೀಯ ವೈದ್ಯಕೀಯ ಸಂಘದ ಉಡುಪಿ ಕರಾವಳಿ ಶಾಖೆಯ ಅಧ್ಯಕ್ಷ ಡಾ.ವೈ.ಸುದರ್ಶನ್ ರಾವ್, ರೋಟರಿ ಸಹಾಯಕ ಗವರ್ನರ್ ಬಾಲಕೃಷ್ಣ ಎಸ್. ಮದ್ದೋಡಿ, ನಿವೃತ್ತ ಡಿಎಫ್‌ಒ ರಘುರಾಮ್, ಡಾ.ಚೆನ್ನಪ್ಪ, ವೀಣಾ ರಾವ್, ರಶ್ಮಿ ಕೃಷ್ಣಪ್ರಸಾದ್, ಪ್ರಾಂಶುಪಾಲೆ ಪೂರ್ಣಿಮಾ ಉಪಸ್ಥಿತರಿದ್ದರು.