×
Ad

ಉಜಿರೆ : ಶ್ರೀ ಬಾಹುಬಲಿ ಕ್ರೆಡಿಟ್ ಸೌಹಾರ್ದ ಸಹಕಾರಿ ಶಾಖೆ ಉದ್ಘಾಟನೆ

Update: 2018-02-18 21:54 IST

ಉಜಿರೆ,ಫೆ.18: ಸಹಕಾರಿ ಕ್ಷೇತ್ರ ಪವಿತ್ರವಾಗಿದ್ದು, ಗ್ರಾಮಾಂತರ ಪ್ರದೇಶಗಳಲ್ಲಿ ಉತ್ತಮ ಸೇವೆಯಿಂದ ಸಹಕಾರಿ ಸಂಘಗಳು ಜನಪ್ರಿಯವಾಗಿವೆ. ಗ್ರಾಹಕರ ಠೇವಣಿಯ ರಕ್ಷಣೆಯೊಂದಿಗೆ ಅದರ ಸದುಪಯೋಗ ಮಾಡಿ ಉತ್ತಮ ಸಮಾಜ ಸೇವೆ ಮಾಡಬೇಕು ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನ ಅಧ್ಯಕ್ಷ ಎಂ. ಎನ್. ರಾಜೇಂದ್ರ ಕುಮಾರ್ ಹೇಳಿದರು.

ಅವರು ರವಿವಾರ ಉಜಿರೆಯಲ್ಲಿ ಶ್ರೀ ಬಾಹುಬಲಿ ಕ್ರೆಡಿಟ್ ಸೌಹಾರ್ದ ಸಹಕಾರಿ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.ಸಹಕಾರಿ ಕ್ಷೇತ್ರದಲ್ಲಿ ಪರಸ್ಪರ ಪ್ರೀತಿ-ವಿಶ್ವಾಸ ಹಾಗೂ ಪ್ರಾಮಾಣಿಕತೆ ಮುಖ್ಯ. ವಾಣಿಜ್ಯ ಬ್ಯಾಂಕುಗಳಲ್ಲಿ ಹಣದ ವಂಚನೆ, ದುರುಪಯೋಗವಾಗುತ್ತಿರುವುದನ್ನು ಅವರು ಖಂಡಿಸಿದರು.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಶುಭಾಶಂಸನೆ ಮಾಡಿ ಸ್ಪರ್ಧೆಗಿಂತ ಸೇವೆ ಹಾಗೂ ಸಹಕಾರ ಮುಖ್ಯ. ಸಹಕಾರಿ ಕ್ಷೇತ್ರದಲ್ಲಿ ಸದಾ ನಂಬಿಕೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಗ್ರಾಹಕರ ಸೇವೆಯೊಂದಿಗೆ ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಿರುವುದಕ್ಕೆ ಅಭಿನಂದಿಸಿ ಶುಭ ಹಾರೈಸಿದರು.

ಉನ್ನತ ಸಾಧನೆ ಮಾಡಿದ ಸಂಸ್ಥೆಯ ಕಾರ್ಯದರ್ಶಿ ವಿಶುಕುಮಾರ್ ಜೈನ್ ಅವರನ್ನು ಗೌರವಿಸಲಾಯಿತು.ಅಧ್ಯಕ್ಷತೆ ವಹಿಸಿದ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಪಡ್ವೆಟ್ನಾಯ ಮಾತನಾಡಿ, ನೂತನ ಶಾಖೆ ಉತ್ತಮ ಪ್ರಗತಿ ಸಾಧಿಸಲೆಂದು ಹಾರೈಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಬಾಹುಬಲಿ ಕ್ರೆಡಿಟ್ ಸೌಹಾರ್ದ ಸಹಕಾರಿ ಅಧ್ಯಕ್ಷ ನೇಮಿರಾಜ ಆರಿಗ ಸಂಸ್ಥೆಯ ಪ್ರಗತಿ-ಸಾಧನೆಯ ಮಾಹಿತಿ ನೀಡಿ ಬೆಳ್ತಂಗಡಿ ಶಾಖೆಯಲ್ಲಿ ಆರು ಕೋಟಿ ರೂ. ಠೇವಣಾತಿ ಇದೆ ಎಂದು ತಿಳಿಸಿದರು. 

ಉಜಿರೆ ಚಂದಯ್ಯ ನಾಯ್ಕ ಮತ್ತು ಶುಭಂ ಗುರುವಾಯನಕೆರೆ ಅವರಿಗೆ ಗಾಲಿಕುರ್ಚಿ ವಿತರಿಸಲಾಯಿತು.
ಸಲಹಾ ಸಮಿತಿ ಅಧ್ಯಕ್ಷರಾದ ವಕೀಲ ಶಶಿಕಿರಣ ಜೈನ್ ಸ್ವಾಗತಿಸಿದರು. ಸಂಸ್ಥೆಯ ಕಾರ್ಯದರ್ಶಿ ವಿಶುಕುಮಾರ್ ಧನ್ಯವಾದವಿತ್ತರು. ಮಹಾವೀರ ಜೈನ್ ಇಚಿಲಂಪಾಡಿ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News