ಅಹ್ಮದಾಬಾದ್ ಬಂದ್ : ಜಿಗ್ನೇಶ್ ಮೇವಾನಿ ಸಹಿತ ಹಲವರ ಬಂಧನ, ಬಿಡುಗಡೆ

Update: 2018-02-18 16:35 GMT

ಅಹ್ಮದಾಬಾದ್, ಫೆ. 18: ದಲಿತ ಹೋರಾಟಗಾರ ಭಾನುಭಾಯ್ ವಾಂಕರ್ ಗುರುವಾರ ಆತ್ಮಾಹುತಿ ಮಾಡಿಕೊಂಡ ಹಿನ್ನೆಲೆಯಲ್ಲಿ ರವಿವಾರ ಅಹ್ಮದಾಬಾದ್ ಬಂದ್‌ಗೆ ಕರೆ ನೀಡಿದ್ದ ಗುಜರಾತ್‌ನ ದಲಿತ ನಾಯಕ ಹಾಗೂ ಸ್ವತಂತ್ರ ಶಾಸಕ ಜಿಗ್ನೇಶ್ ಮೇವಾನಿ ಸಹಿತ ಹಲವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಅನಂತರ ಬಿಡುಗಡೆ ಮಾಡಿದ್ದಾರೆ. ಸಾರಂಗಪುರದ ಡಾ. ಅಂಬೇಡ್ಕರ್ ಪ್ರತಿಮೆ ಎದುರು ಸೇರಿ ಪ್ರತಿಭಟನೆ ನಡೆಸಲು ಮೇವಾನಿ ನಿರ್ಧರಿಸಿದ್ದರು. ಆದರೆ, ಕಾರು ಸಾರಸಪುರ ತಲುಪುತ್ತಿದ್ದಂತೆ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಇನ್ನೋರ್ವ ದಲಿತ ನಾಯಕ ನೌಶದ್ ಸೋಲಂಕಿಯನ್ನು ಕೂಡ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇವರಲ್ಲದೆ, ಭೀಮ್ ಶಕ್ತಿ ಸೇನಾದ ಕನಿಷ್ಠ 25 ಸದಸ್ಯರನ್ನು ವಶಕ್ಕೆ ಪಡೆಯಲಾಗಿದೆ. ಇವರೆಲ್ಲರನ್ನೂ ಅನಂತರ ಬಿಡುಗಡೆ ಗೊಳಿಸಲಾಯಿತು. ಮೃತದೇಹ ಸ್ವೀಕರಿಸಲು ನಿರಾಕರಣೆ ಗಾಂಧಿನಗರದ ನಾಗರಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಭಾನುಭಾಯ್ ವಾಂಕರ್ ಮೃತದೇಹವನ್ನು ಸ್ವೀಕರಿಸಲು ಅವರ ಕುಟುಂಬದ ಸದಸ್ಯರು ನಿರಾಕರಿಸಿದರು. ಭಾನುಭಾಯ್ ವಾಂಕರ್ ಆತ್ಮಾಹುತಿ ಬಗ್ಗೆ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸುವ ಕುಟುಂಬದ ಆಗ್ರಹ ಬೆಂಬಲಿಸಿ ಹಾಗೂ ರಾಜ್ಯಾದ್ಯಂತ ದಲಿತರಿಗೆ ಮಂಜೂರು ಮಾಡಿದ್ದ ಭೂಮಿಯನ್ನು ಮರು ಮಂಜೂರು ಮಾಡುವಂತೆ ಆಗ್ರಹಿಸಿ ಸಾವಿರಾರು ದಲಿತರು ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ನಿತೀನ್ ಪಟೇಲ್, ಪ್ರಶ್ನೆಗೆ ಒಳಗಾದ ಭೂಮಿಯನ್ನು ಕುಟುಂಬದ ಸದಸ್ಯರಿಗೆ ವರ್ಗಾಯಿಸಲಾಗುವುದು ಎಂದಿದ್ದಾರೆ. ಕುಟುಂಬದ ಆಗ್ರಹದಂತೆ ತನಿಖೆಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ಆಯೋಗ ಅಥವಾ ಸಿಟ್ ರೂಪಿಸಲಿದ್ದೇವೆ. ಘಟನೆಗೆ ಜವಾಬ್ದಾರರಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಕುಟುಂಬದ ಸದಸ್ಯರೊಬ್ಬರಿಗೆ ಸರಕಾರಿ ಉದ್ಯೋಗ ನೀಡಲಾಗುವುದು. ಕುಟಂಬಕ್ಕೆ 8 ಲಕ್ಷ ರೂ. ಪರಿಹಾರ ನೀಡಲಾಗುವುದು. 4 ಲಕ್ಷ ರೂ.ವನ್ನು ತತ್‌ಕ್ಷಣ ಕುಟುಂಬಕ್ಕೆ ಹಸ್ತಾಂತರಿಸ ಲಾಗುವುದು ಎಂದು ಪಟೇಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News