×
Ad

ತ್ರಿಪುರಾ ವಿಧಾನ ಸಭೆ ಚುನಾವಣೆ: ಶೇ. 74 ಮತದಾನ ದಾಖಲು

Update: 2018-02-18 22:09 IST

ಹೊಸದಿಲ್ಲಿ, ಫೆ. 18: ತ್ರಿಪುರಾ ವಿಧಾನ ಸಭೆ ಚುನಾವಣೆಯ ಮೊದಲ ಹಂತದ ಮತದಾನದಲ್ಲಿ ಶೇ. 74 ಮತದಾನ ದಾಖಲಾಗಿದೆ. ಇದು ಕಳೆದ ವಿಧಾನ ಸಭೆ ಚುನಾವಣೆಗೆ ಹೋಲಿಸಿದರೆ ಶೇ. 17 ಕಡಿಮೆ. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಶೇ. 91.82 ಮತದಾನ ದಾಖಲಾಗಿತ್ತು ಎಂದು ಚುನಾವಣಾ ಆಯೋಗ ಹೇಳಿದೆ.

 ಮತದಾನ ಯಂತ್ರಗಳು ಕಾರ್ಯ ನಿರ್ವಹಿಸದ ಬಗ್ಗೆ ಹಲವು ದೂರುಗಳು ಬಂದಿವೆ. ಆದರೆ, ಅದರಲ್ಲಿ ಹೆಚ್ಚಿನ ದೂರುಗಳಲ್ಲಿ ಸತ್ಯವಿಲ್ಲ ಎಂದು ಎಂದು ಮತದಾನದ ಕಾವಲು ಸಂಸ್ಥೆ ಹೇಳಿದೆ. ಒಟ್ಟು 12 ಸ್ಥಳಗಳಲ್ಲಿ ಮತದಾನ ಯಂತ್ರಗಳನ್ನು ಬದಲಾಯಿಸಲಾಗಿದೆ. ರಾಜ್ಯದ ಯಾವುದೇ ಸ್ಥಳದಲ್ಲಿ ಹಿಂಸಾಚಾರದ ಘಟನೆಗಳು ವರದಿಯಾಗಿಲ್ಲ. ಪತ್ತೆಯಾದ ಎರಡು ಕಚ್ಛಾ ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ವಿಧಾನ ಸಭೆಯ 60 ಸ್ಥಾನಗಳಲ್ಲಿ 59 ಸ್ಥಾನಗಳಿಗೆ ಚುನಾವಣೆ ನಡೆಸಲಾಯಿತು. ಸಿಪಿಎಂ ಅಭ್ಯರ್ಥಿ ರಾಮೇಂದ್ರ ನಾರಾಯಣ ದೇವ್ ಬರ್ಮಾ ಅವರು ಮೃತಪಟ್ಟ ಹಿನ್ನೆಲೆಯಲ್ಲಿ ಚಾರಿಲಮ್ ಕ್ಷೇತ್ರಕ್ಕೆ ಮತದಾನ ನಡಸಲು ಸಾಧ್ಯವಾಗಲಿಲ್ಲ. ಈ ಕ್ಷೇತ್ರಕ್ಕೆ ಮಾರ್ಚ್ 12ರಂದು ಚುನಾವಣೆ ನಡೆಯಲಿದೆ.

ಈ ತಿಂಗಳಲ್ಲಿ ಚುನಾವಣೆ ನಡೆಯಲಿರುವ ಮೂರು ಈಶಾನ್ಯ ರಾಜ್ಯಗಳ ಪೈಕಿ ತ್ರಿಪುರದಲ್ಲಿ ಮೊದಲು ಚುನಾವಣೆ ನಡೆಯುತ್ತಿದ್ದು, ಈ ಚುನಾವಣೆಯನ್ನು ಎಡರಂಗ ಹಾಗೂ ಬಿಜೆಪಿಯ ನಡುವಿನ ನೇರ ಸಮರ ಎಂದು ಪರಿಗಣಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News