ಮಹಾರಾಷ್ಟ್ರ:ಅಗ್ಗದ ಸ್ಯಾನಿಟರಿ ಪ್ಯಾಡ್ ಯೋಜನೆಗೆ ಮಾ.8ರಂದು ಚಾಲನೆ
ಮುಂಬೈ,ಫೆ.18: ಅಂತಾರಾಷ್ಟ್ರಿಯ ಮಹಿಳಾ ದಿನವಾದ ಮಾ.8ರಂದು ಅಗ್ಗದ ಸ್ಯಾನಿಟರಿ ಪ್ಯಾಡ್‌ಗಳನ್ನು ಒದಗಿಸುವ ತನ್ನ ‘ಅಸ್ಮಿತಾ ಯೋಜನೆ’ಗೆ ಚಾಲನೆ ನೀಡಲು ಮಹಾರಾಷ್ಟ್ರ ಸರಕಾರವು ಸಜ್ಜಾಗಿದೆ.
ಯೋಜನೆಯಡಿ ಜಿಲ್ಲಾ ಪರಿಷದ್ ಶಾಲೆಗಳ ವಿದ್ಯಾರ್ಥಿನಿಯರು ನ್ಯಾಪ್ಕಿನ್ ಪ್ಯಾಕೆಟ್‌ಗಳನ್ನು ತಲಾ ಐದು ರೂ.ಗೆ ಮತ್ತು ಗ್ರಾಮೀಣ ಮಹಿಳೆಯರು 24 ರೂ.ಮತ್ತು 29 ರೂ.ಗಳ ಸಬ್ಸಿಡಿ ದರಗಳಲ್ಲಿ ಪಡೆಯಲಿದ್ದಾರೆ.
ಮಾ.8ರಂದು ಈ ಯೋಜನೆಗೆ ವಿಧ್ಯುಕ್ತ ಚಾಲನೆಯನ್ನು ನೀಡಲಾಗುತ್ತಿದ್ದು, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಬಾಲಿವುಡ್ ನಟ ಅಕ್ಷಯ ಕುಮಾರ್ ಅವರು ಉಪಸ್ಥಿತರಿರುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧಿಕಾರಿ ಯೋರ್ವರು ತಿಳಿಸಿದರು.
ಇತ್ತೀಚಿಗೆ ಬಿಡುಗಡೆಗೊಂಡಿರುವ ಅಕ್ಷಯ ನಟನೆಯ ‘ಪ್ಯಾಡ್‌ಮ್ಯಾನ್’ ಚಿತ್ರವು ಗ್ರಾಮೀಣ ಮಹಿಳೆಯರಲ್ಲಿ ಋತುಚಕ್ರಕ್ಕೆ ಸಂಬಂಧಿಸಿದಂತೆ ನೈರ್ಮಲ್ಯದ ಅರಿವು ಮೂಡಿಸುವ ಕಥೆಯನ್ನು ಹೊಂದಿದೆ.
11ರಿಂದ 19ವರ್ಷ ವಯೋಮಾನದವರಲ್ಲಿ ಮತ್ತು ಮಹಾರಾಷ್ಟ್ರದ ಗ್ರಾಮೀಣ ಭಾಗಗಳಲ್ಲಿಯ ಸಾಮಾನ್ಯ ಮಹಿಳೆಯರಲ್ಲಿ ಋತುಚಕ್ರ ಅವಧಿಯ ನೈರ್ಮಲ್ಯದ ಕುರಿತು ಹೆಚ್ಚಿನ ಅರಿವಿಲ್ಲ, ಈ ಪೈಕಿ ಕೇವಲ ಶೇ.17ರಷ್ಟು ಮಹಿಳೆಯರು ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ಬಳಸುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದರು.