ಬಿಜೆಪಿ ಅಧ್ಯಕ್ಷರ ಕ್ರಮ ಕೆಟ್ಟ ಸಂದೇಶ ನೀಡುತ್ತದೆ : ಮುನೀರ್ ಕಾಟಿಪಳ್ಳ

Update: 2018-02-19 13:26 GMT

ಮಂಗಳೂರು, ಫೆ.19: ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರ ಮಂಗಳೂರು ಪ್ರವಾಸದ ವಿವರ ನೋಡಿ ಆಘಾತವಾಗಿದೆ. ಅವರ ಭೇಟಿಯ ಪಟ್ಟಿಯಲ್ಲಿ ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಯಾದ ದೀಪಕ್ ರಾವ್ ಮನೆ ಸೇರಿದೆ. ಅದೇ ಕೋಮುದ್ವೇಷಕ್ಕೆ ಕೊಲೆಯಾದ ಬಶೀರ್ ಮನೆಗೆ ಭೇಟಿ ಅವರ ಕಾರ್ಯಕ್ರಮದ ಪಟ್ಟಿಯಲ್ಲಿಲ್ಲ. ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರೊಬ್ಬರು ಈ ರೀತಿ ಬಹಿರಂಗವಾಗಿ ನಡೆದುಕೊಳ್ಳುವುದು ಕೆಟ್ಟ ಸಂದೇಶವನ್ನು ನೀಡುತ್ತದೆ ಎಂದು ಡಿವೈಎಫ್ ಐ  ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಾಮಾನ್ಯ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಬಶೀರ್, ದೀಪಕ್ ಇಬ್ಬರ ಮನೆಗೂ ಭೇಟಿ ನೀಡಿದ್ದಾರೆ. ಬೇರೆ ಪಕ್ಷಗಳ ಮುಖಂಡರನ್ನು ಒಂದು ಧರ್ಮದ ಸಂತ್ರಸ್ತರ ಮನೆಗೆ ಮಾತ್ರ ಭೇಟಿ ನೀಡುತ್ತೀರಿ, ಓಲೈಕೆ, ತಾರತಮ್ಯ ಮಾಡುತ್ತೀರಿ ಎಂದು ತರಾಟೆಗೈಯ್ಯುವ ಪಕ್ಷ, ಸ್ವತಹ ತನ್ನ ನಡವಳಿಕೆಯಲ್ಲಿ ಅದೇ ವರ್ತನೆ ತೋರುತ್ತಿರುವುದು ಈ ಭೇಟಿಯಿಂದ ಸ್ಪಷ್ಟವಾಗಿದೆ. ಬಹುಷ ಈ ಭೇಟಿಯ ಮೂಲಕ, ಬಶೀರ್ ಸಾವಿನಿಂದ ನಮಗೆ ನೋವಾಗಿಲ್ಲ ಎಂದು ಹೇಳಿಕೆ ನೀಡಿದ್ದ ವಿಎಚ್‌ಪಿ ಮುಖಂಡ ಶೇಣವರ ಮಾತನ್ನು ಅಮಿತ್ ಶಾ ಸಮರ್ಥಿಸಲು ಹೊರಟಂತಿದೆ. ಏನೇ ಇದ್ದರು ದೇಶ ಆಳುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡೆದುಕೊಳ್ಳುವ ರೀತಿ ಇದಲ್ಲ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಇದು ಅಲ್ಪಸಂಖ್ಯಾತರಲ್ಲಿ ಅಭದ್ರತೆಯನ್ನೂ, ಸಮಾಜದಲ್ಲಿ ಕೋಮು ಧ್ರುವೀಕರಣವನ್ನೂ ಹೆಚ್ಚಿಸುತ್ತದೆ. ಬಹುಷ ಅಮಿತ್ ಶಾ ಉದ್ದೇಶ ಅದೇ ಇರಬೇಕು. ಇದು ಖಂಡನೀಯ, ಕರಾವಳಿಯ ಜನಸಾಮಾನ್ಯರು ಇದನ್ನು ಗಟ್ಟಿ ಧ್ವನಿಯಲ್ಲಿ ವಿರೋಧಿಸಬೇಕು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News