ಕಾಮಗಾರಿ ವೇಳೆ ಗುಡ್ಡ ಕುಸಿತ : ಮಣ್ಣಿನೊಳಗೆ ಸಿಲುಕಿಕೊಂಡ ಹಿಟಾಚಿ, ಅಪರೇಟರ್

Update: 2018-02-19 13:32 GMT

ಬೆಳ್ತಂಗಡಿ,ಫೆ.19 : ಮಣ್ಣಿನ ಕಾಮಗಾರಿ ನಡೆಸುತ್ತಿದ್ದ ವೇಳೆ ಹಿಟಾಚಿ ಮೇಲೆ ಗುಡ್ಡ ಜರಿದು ಬಿದ್ದು ಹಿಟಾಚಿ ಹಾಗೂ ಅಪರೇಟರ್ ಮಣ್ಣಿನೊಳಗೆ ಸಿಲುಕಿಕೊಂಡ ಘಟನೆ ಸೋಮವಾರ ಮಡಂತ್ಯಾರು ಬಳಿ ನಡೆದಿದೆ. 

ಹಿಟಾಚಿ ಅಪರೇಟರ್ ಉತ್ತರ ಪ್ರದೇಶ ಮೂಲದ ದೀಪಕ್(21) ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಗಳೂರು ಕಡೂರು ರಾಷ್ಟ್ರೀಯ ಹೆದ್ದಾರಿ ಮಡಂತ್ಯಾರು ಬಳಿ ಮಣ್ಣು ತೆಗೆಯುವ ಕಾರ್ಯ ಕಳೆದ ಹಲವಾರು ದಿನಗಳಿಂದ ನಡೆಯುತ್ತಿದ್ದು ಅತೀ ಎತ್ತರ ಪ್ರದೇಶವಾದ್ದರಿಂದ ಕೆಳಗಿನಿಂದ ಮಣ್ಣು ತೆಗೆಯುವ ಕಾರ್ಯ ನಡೆಯುತ್ತಿತ್ತು. ಸೋಮವಾರ ಒಂದು ಅಪರೇಟರ್ ಚಾ ಕುಡಿಯಲು ಹೋದ ವೇಳೆ ದೀಪಕ್ ಎಂಬಾತ ಮಣ್ಣು ತೆಗೆಯುವ ಕಾರ್ಯ ಮಾಡುತ್ತಿದ್ದು ಆ ವೇಳೆ ಎಕಾಏಕಿ ಗುಡ್ಡ ಜರಿದು ಹಿಟಾಚಿಯ ಮೇಲೆ ಮಣ್ಣು ಬಿದ್ದಿದ್ದು ಅಪರೇಟರ್ ಸಹಿತ ಮಣ್ಣಿನೊಳಗೆ ಸಿಲುಕಿಕೊಂಡಿದ್ದಾರೆ.

ತಕ್ಷಣ ಸ್ಥಳೀಯರು ಮಣ್ಣು ಸರಿಸಿ ಅಪರೇಟರ್ ದೀಪಕ್‍ನ್ನು ಹೊರಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. 

ರಾಷ್ಟ್ರೀಯ ಹೆದ್ದಾರಿ ಬಳಿ ಈ ರೀತಿಯ ಮಣ್ಣು ತೆಗೆಯುವ ಕಾರ್ಯ ಮಾಡುತ್ತಿದ್ದು ಇದು ಮಳೆಗಾಲ ಸಂದರ್ಭದಲ್ಲಿ ಜರಿಯುವ ಸಾಧ್ಯತೆಯಿದ್ದುದರಿಂದ ರಸ್ತೆ ವಾಹನ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆ ಇದ್ದು ಈ ಬಗ್ಗೆ ಸಂಬಂದಪಟ್ಟ ಇಲಾಖೆ ಎಚ್ಚೆತ್ತುಕೊಳ್ಳುವ ಅಗತ್ಯವಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News