ಅಡಿಕೆ ನಿಷೇಧ ಭಯ ನಿವಾರಣೆಗೆ ದಾಖಲೆ ಸಹಿತ ಹೋರಾಟ : ಭಾರತೀಯ ಕಿಸಾನ್ ಸಂಘ ತೀರ್ಮಾನ

Update: 2018-02-19 13:55 GMT

ಪುತ್ತೂರು,ಫೆ.19: ಅಡಿಕೆ ನಿಷೇಧ ಹಾಗೂ ಅಡಿಕೆ ಕ್ಯಾನ್ಸರ್‍ಕಾರಕ ಎಂಬ ಕೃಷಿಕರ ಭಯವನ್ನು ಶಾಶ್ವತವಾಗಿ ನಿವಾರಣೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಹಂತ ಹಂತವಾಗಿ ದಾಖಲೆ ಸಹಿತ ಹೋರಾಟ ಅಗತ್ಯವಾಗಿದೆ ಎಂದು ಭಾರತೀಯ ಕಿಸಾನ್ ಸಂಘ ತೀರ್ಮಾನಿಸಿದೆ.

ಪುತ್ತೂರಿನ ಭಾರತೀಯ ಕಿಸಾನ್ ಸಂಘದ ಕಚೇರಿಯಲ್ಲಿ ಸೋಮವಾರ ಸಂಘದ ಪ್ರಮುಖರ ಸಭೆ ನಡೆಯಿತು. ಅಡಿಕೆ ನಿಷೇಧದದ ಬಗ್ಗೆ ಕೇಂದ್ರ ಆರೋಗ್ಯ ಸಚಿವರ ಹೇಳಿಕೆ ಇಲ್ಲ, ಆದರೆ ಕ್ಯಾನ್ಸರ್‍ಕಾರಕ ಎಂಬ ಉತ್ತರ ಇಂದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಇದು ಕಳೆದ ಸುಮಾರು 10 ವರ್ಷಗಳಿಂದಲೇ ಚರ್ಚೆಯಲ್ಲಿದೆ. ಆದರೆ ಅಡಿಕೆ ಜಗಿಯುವುದಕ್ಕೆ ಮಾತ್ರವಲ್ಲ ಇತರ ವಸ್ತುಗಳಲ್ಲೂ ಬಳಕೆಯಾಗುತ್ತಿದೆ. ಹೀಗಾಗಿ ಏಕಾಏಕಿ ಅಡಿಕೆ ನಿಷೇಧ ಸಾಧ್ಯವಿಲ್ಲ. ಅಡಿಕೆಯನ್ನು ಅನೇಕ ವರ್ಷಗಳಿಂದ ಔಷಧೀಯ ಬಳಕೆಯಲ್ಲೂ ಉಪಯೋಗ ಮಾಡಲಾಗುತ್ತಿದೆ. ಸದ್ಯ ಈ ವಿಚಾರವು ಸುಪ್ರೀಂಕೋರ್ಟ್‍ನಲ್ಲಿ ಇರುವುದರಿಂದ ಜನಪ್ರತಿನಿಧಿಗಳು ಕೂಡಾ ಈ ಬಗ್ಗೆ ಸಂಘಟಿತ ಹೋರಾಟ ಮಾಡಬೇಕಿದೆ. ಸುಪ್ರೀಂಕೋರ್ಟ್ ಕೂಡಾ ಏಕಾಏಕಿ ಅಡಿಕೆಯನ್ನು ನಿಷೇಧ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ.

ಅಡಿಕೆ ಕ್ಯಾನ್ಸರ್‍ಕಾರಕ ಅಲ್ಲ ಎಂಬ ವಿಷಯ ಮನದಟ್ಟು ಮಾಡಬೇಕಿದೆ ಎಂಬ ವಿಷಯವನ್ನು ಚರ್ಚೆ ಮಾಡಲಾಯಿತು. ಈಗ ಲೋಕಸಭೆಯಲ್ಲಿ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವರು 2013 ರ ವರದಿಯನ್ನೇ ಮತ್ತೆ ಹೇಳಿದ್ದಾರೆ. ಆ ಬಳಿಕ ಅನೇಕ ಅಧ್ಯಯನಗಳು, ಬೆಳವಣಿಗೆಗಳು ನಡೆದಿವೆ. ಈ ಬಗ್ಗೆಯೂ ಚರ್ಚೆಯಾಗಬೇಕಿದೆ ಎಂಬ ಸಲಹೆ ಸಭೆಯಲ್ಲಿ ವ್ಯಕ್ತವಾಯಿತು.

ಈ ನಡುವೆ ಸುಪ್ರೀಂಕೋರ್ಟ್‍ನಲ್ಲಿ ಅಡಿಕೆ ಬಗ್ಗೆ ಆಕ್ಷೇಪ ವ್ಯಕ್ತವಾದ ಬಳಿಕ ಎಲ್ಲಾ ರಾಜ್ಯಗಳಿಗೂ ಸುಪ್ರೀಂಕೋರ್ಟ್ ತಮ್ಮ ಅಭಿಪ್ರಾಯ ತಿಳಿಸಲು ಹೇಳಿತ್ತು. 2013 ಮೇ 3 ರಂದು ಈ ಸೂಚನೆ ಎಲ್ಲಾ ರಾಜ್ಯಗಳಿಗೂ ಕಳುಹಿಸಲಾಗಿತ್ತು. ದೇಶದ ಕೆಲವು ರಾಜ್ಯಗಳು ಅಭಿಪ್ರಾಯ ತಿಳಿಸಿದ್ದರೆ ರಾಜ್ಯ ಸರಕಾರದಿಂದ ಯಾವುದೇ ಅಭಿಪ್ರಾಯ ದಾಖಲಿಸಿದ ಬಗ್ಗೆ ಮಾಹಿತಿ ಇಲ್ಲ. ಹೀಗಾಗಿ ಅಡಿಕೆ ಬಗ್ಗೆ ದಾಖಲೆ ಸಹಿತ ಹೋರಾಟ ಅಗತ್ಯವಾಗಿದೆ ಎಂಬ ಅಭಿಪ್ರಾಯಕ್ಕೆ ಬರಲಾಯಿತು. 

ಅಡಿಕೆ ನಿಷೇಧವಾಗುವ ಯಾವುದೇ ಅವಕಾಶ ಇಲ್ಲ, ಆದರೆ ಧಾರಣೆ ಮೇಲೆ ಈ ಗುಮ್ಮ ಪರಿಣಾಮ ನೀಡುತ್ತಿದೆ. ಇದರಿಂದ ಅಡಿಕೆ ಧಾರಣೆ ಏರಿಳಿಕೆ ಕಂಡಿದೆ. ಇದು ಬೆಳೆಗಾರರಿಗೆ ಸಂಕಷ್ಟಕ್ಕೆ ಕಾರಣವಾಗಿದೆ. ಆದರೆ ಬೆಳೆಗಾರರು ಭಯಗೊಳ್ಳುವ ಅಗತ್ಯವೇ ಇಲ್ಲ. ಆದರೆ ಶಾಶ್ವತ ಪರಿಹಾರ ಆಗಲೇಬೇಕಿದೆ ಎಂದು ಕಿಸಾನ್ ಸಂಘ ಅಭಿಪ್ರಾಯಪಟ್ಟಿತು.

ಸಭೆಯಲ್ಲಿ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಕಾರ್ಯದರ್ಶಿ ಸುಬ್ರಾಯ, ಪ್ರಮುಖರಾದ ಮೂಲಚಂದ್ರ, ಎಂ.ಜಿ.ಸತ್ಯನಾರಾಯಣ, ಸದಾಶಿವ ಎಪಿ, ಶಂಕರ ಭಟ್ ಬದನಾಜೆ, ಬಿ.ಟಿ.ನಾರಾಯಣ ಭಟ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News