ಸರಕಾರಿ ಎನ್.ಪಿ.ಎಸ್. ನೌಕರರ ಸಮಾಲೋಚನೆ ಸಭೆ
ಮೂಡುಬಿದಿರೆ, ಫೆ19: ಕರ್ನಾಟಕ ರಾಜ್ಯ ಎನ್.ಪಿ.ಎಸ್. ನೌಕರರ ಸಂಘ (ರಿ.) ಬೆಳ್ತಂಗಡಿ ತಾಲೂಕು ಇದರ ನೇತೃತ್ವದಲ್ಲಿ ಮೂಡುಬಿದಿರೆ ಸರಕಾರಿ ಎನ್.ಪಿ.ಎಸ್. ನೌಕರರ ಸಮಾಲೋಚನೆ ಸಭೆಯನ್ನು ನಾಡಕಛೇರಿಯ ಸಭಾಂಗಣದಲ್ಲಿ ಶನಿವಾರ ನಡೆಸಲಾಯಿತು.
2006 ರ ನಂತರ ಸೇವೆಗೆ ಸೇರಿದ ರಾಜ್ಯ ಸರಕಾರಿ ನೌಕರರಿಗೆ ನಿಶ್ಚಿತ ಪಿಂಚಣಿ ಇಲ್ಲದಿದ್ದು ವಂತಿಗೆ ರೂಪದ ಶೇರು ಮಾರುಕಟ್ಟೆ ಆಧಾರಿತ ಪದ್ಧತಿ ಜಾರಿಯಲ್ಲಿದೆ. ಇದು ನೌಕರರ ಸಂಧ್ಯಾಕಾಲದ ಬದುಕಿಗೆ ಮಾರಕವಾಗಿರುವುದರಿಂದ ಇದನ್ನು ರಾಜ್ಯದೆಲ್ಲೆಡೆ ನೌಕರರು ವಿರೋಧಿಸಿ ಹೋರಾಟ ಕೈಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಎನ್.ಪಿ.ಎಸ್. ನೌಕರರ ಸಂಘದ ಅಧ್ಯಕ್ಷ ಸುರೇಶ್ ಮಾಚಾರ್ ಎನ್.ಪಿ.ಎಸ್. ಮಾತನಾಡುತ್ತ ಯೋಜನೆಯು ಜ.1, 2004 ರಿಂದ ಕೇಂದ್ರ ಸರಕಾರಿ ನೌಕರರಿಗೆ ಹಾಗೂ ಎಪ್ರಿಲ್ 1, 2006 ರ ನಂತರ ಸೇವೆಗೆ ಸೇರಿದ ರಾಜ್ಯ ಸರಕಾರಿ ನೌಕರರಿಗೆ ಅನ್ವಯಿಸುತ್ತದೆ. ಇದರಲ್ಲಿ ನೌಕರರ ವೇತನದ ಶೇ. 10 ಕ್ಕೆ ಸರಕಾರವು ಅದೇ ಪ್ರಮಾಣದ ಮೊತ್ತವನ್ನು ಸೇರಿಸಿ ಶೇರು ಮಾರುಕಟ್ಟೆಯಲ್ಲಿ ತೊಡಗಿಸಲಾಗುತ್ತದೆ. ಹೀಗೆ ತೊಡಗಿಸುವ ಹಣಕ್ಕೆ ಯಾವುದೇ ರೀತಿಯ ಭದ್ರತೆ ಇಲ್ಲದಿದ್ದು ಇದೊಂದು ಅವೈಜ್ಞಾನಿಕ ಯೋಜನೆ ಎಂದರು. ಅಲ್ಲದೆ ಹಳೆ ಪಿಂಚಣಿ ಪಡೆಯುವ ನೌಕರರಿಗೆ ಇರುವ ಯಾವುದೇ ಸೌಲಭ್ಯಗಳು ಈ ನೂತನ ಪಿಂಚಣಿ ಯೋಜನೆಯಲ್ಲಿ ಇಲ್ಲದಿರುವುದರಿಂದ ನೌಕರರಲ್ಲಿ ತಾರತಮ್ಯವನ್ನು ಮಾಡಿದೆ. ಸುಪ್ರೀಂ ಕೋರ್ಟ್ ಕೂಡ ಪಿಂಚಣಿ ಪಿಂಚಣಿ ನೌಕರರ ಹಕ್ಕು ಎಂಬುದಾಗಿ ತಿಳಿಸಿರುವುದನ್ನು ಉಲ್ಲೇಖಿಸಿದರು. ಇದಕ್ಕಾಗಿ ಈಗಾಗಲೇ ದ.ಕ. ಸೇರಿದಂತೆ ಎಲ್ಲಾ ಜಿಲ್ಲೆ ತಾಲೂಕುಗಳಲ್ಲಿ ಹೋರಾಟ ಚುರುಕಾಗಿದೆ.
ಜಿಲ್ಲಾ ಎನ್.ಪಿ.ಎಸ್. ಸಂಘದ ಕೋಶಾಧಿಕಾರಿ ಸುರೇಂದ್ರ ಕೋಟ, ಬೆಳ್ತಂಗಡಿ ಕಾರ್ಯದರ್ಶಿ ಸೀತಾರಾಮ, ಪದಾಧಿಕಾರಿಗಳಾದ ರವಿ, ವೆಂಕಟೇಶ್ ಉಪಸ್ಥಿತರಿದ್ದರು. ಸಹಶಿಕ್ಷಕರಾದ ಮಹೇಶ್ ಶಿಳಿನ ಸ್ವಾಗತಿಸಿ, ದೊರೆಸ್ವಾಮಿ ವಂದಿಸಿದರು. ಮೂಡುಬಿದಿರೆ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಬಸಪ್ಪ ನಾಶಿ, ನೀರ್ಕೆರೆ ಸ.ಪ್ರೌ.ಶಾಲೆಯ ದ್ವಿತೀಯ ದರ್ಜೆ ಸಹಾಯಕ ಮೋಹನ್ ಕುಮಾರ್ ಎನ್., ಗ್ರಾಮ ಲೆಕ್ಕಿಗ ಸಂತೋಷ್ ಹಾಗೂ ಮೂಡುಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ದ್ವಿತೀಯ ದರ್ಜೆ ಸಹಾಯಕ ಮಂಜುನಾಥ ಸಹಕರಿಸಿದರು.