ಬ್ಯಾಂಕ್ ಗಳ ಮಾರುಕಟ್ಟೆ ಬಂಡವಾಳದಲ್ಲಿ 69,759 ಕೋ.ರೂ. ಖೋತಾ

Update: 2018-02-19 14:14 GMT

 ಹೊಸದಿಲ್ಲಿ,ಫೆ.19: ಶೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟಾಗುತ್ತಿರುವ ಭಾರತೀಯ ಬ್ಯಾಂಕುಗಳು ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‌ಬಿ)ನಲ್ಲಿ 11,000 ಕೋ.ರೂ.ಗೂ ಹೆಚ್ಚಿನ ವಂಚನೆ ಪ್ರಕರಣ ಬೆಳಕಿಗೆ ಬಂದ ನಂತರ 69,759 ಕೋ.ರೂ.ಗಳ ಮಾರುಕಟ್ಟೆ ಬಂಡವಾಳವನ್ನು ಕಳೆದುಕೊಂಡಿವೆ. ಇನ್ನಷ್ಟು ಬ್ಯಾಂಕುಗಳು ಈ ವಂಚನೆಗೆ ತೆರೆದುಕೊಂಡಿವೆ ಎಂಬ ವರದಿಯ ಹಿನ್ನೆಲೆಯಲ್ಲಿ ಸೋಮವಾರವೂ ಶೇರು ಮಾರುಕಟ್ಟೆ ಯಲ್ಲಿ ಸರಕಾರಿ ಸ್ವಾಮ್ಯದ ಶೇರುಗಳ ಬೆಲೆ ಕುಸಿತ ಮುಂದುವರಿದಿತ್ತು.

ಶತಕೋಟ್ಯಾಧಿಪತಿ, ವಜ್ರಾಭರಣ ವಿನ್ಯಾಸಕ ಹಾಗೂ ಮಾರಾಟಗಾರ ನೀರವ್ ಮೋದಿಗೆ ಸಂಬಂಧಿಸಿದ ಕಂಪನಿಗಳು ಮುಂಬೈನ ತನ್ನ ಶಾಖೆಯ ಮೂಲಕ ಅಕ್ರಮವಾಗಿ ಖಾತರಿ ಪತ್ರಗಳನ್ನು ಪಡೆದುಕೊಳ್ಳುವ ಮೂಲಕ 11,000 ಕೋ.ರೂ.ಗೂ ಅಧಿಕ ಮೊತ್ತವನ್ನು ವಂಚಿಸಿವೆ ಎಂದು ಪಿಎನ್‌ಬಿ ಕಳೆದ ವಾರ ಬಹಿರಂಗಗೊಳಿಸಿತ್ತು.

 ಮೋದಿಯ ಖಾತರಿ ಪತ್ರಗಳ ಆಧಾರದಲ್ಲಿ ತಾನು ಸುಮಾರು 2,657 ಕೋ.ರೂ.ಗಳ ಸಾಲಗಳನ್ನು ನೀಡಿರುವುದಾಗಿ ಯುಕೋ ಬ್ಯಾಂಕ್ ಶನಿವಾರ ತಿಳಿಸಿತ್ತು. ಇದಕ್ಕೂ ಮುನ್ನ ಎಸ್‌ಬಿಐ ಮತ್ತು ಅಲಹಾಬಾದ್ ಬ್ಯಾಂಕ್‌ಗಳು ತಾವು ಅನುಕ್ರಮವಾಗಿ 1,360 ಕೋ.ರೂ. ಮತ್ತು 2,000 ಕೋ.ರೂ.ಸಾಲಗಳನ್ನು ನೀಡಿರುವುದಾಗಿ ಹೇಳಿದ್ದವು.

ಈ ವಂಚನೆಯಿಂದಾಗಿ ಈಗಾಗಲೇ ಅನುತ್ಪಾದಕ ಆಸ್ತಿ(ಎನ್‌ಪಿಎ)ಗಳ ಏರಿಕೆಯಿಂದಾಗಿ ಒತ್ತಡದಲ್ಲಿರುವ ಬ್ಯಾಂಕುಗಳ ಎನ್‌ಪಿಎ ಇನ್ನಷ್ಟು ಹೆಚ್ಚಲಿದ್ದು, ಅವುಗಳ ಲಾಭ ಇನ್ನಷ್ಟು ಕಡಿಮೆಯಾಗಲಿದೆ ಎಂದು ಆರ್ಥಿಕತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನೀರವ್ ಮೋದಿ ವಂಚನೆ ಪ್ರಕರಣವು ವರದಿಯಾದಾಗಿನಿಂದ ಪಿಎನ್‌ಬಿ ಶೇರುಗಳ ಮೌಲ್ಯ ಶೇ.28ರಷ್ಟು ಕುಸಿದಿದ್ದು, ಅದರ ಮಾರುಕಟ್ಟೆ ಬಂಡವಾಳದಲ್ಲಿ ಸುಮಾರು 10,976 ಕೋ.ರೂ. ಖೋತಾ ಆಗಿದೆ. ಎಸ್‌ಬಿಐ ತನ್ನ ಮಾರುಕಟ್ಟೆ ಬಂಡವಾಳದಲ್ಲಿ ಸುಮಾರು 18,000 ಕೋ.ರೂ.ಗಳನ್ನು ಕಳೆದುಕೊಂಡಿದ್ದರೆ, ಬ್ಯಾಂಕ್ ಆಫ್ ಬರೋಡಾ 5,634 ಕೋ.ರೂ.ಗಳ ನಷ್ಟವನ್ನು ಅನುಭವಿಸಿದೆ.

ಖಾಸಗಿ ಬ್ಯಾಂಕುಗಳ ಪೈಕಿ ಎಕ್ಸಿಸ್ ಬ್ಯಾಂಕ್ ಸುಮಾರು 5,630 ಕೋ.ರೂ., ಯೆಸ್ ಬ್ಯಾಂಕ್ 4,820 ಕೋ.ರೂ. ಮತ್ತು ಐಸಿಐಸಿಐ ಬ್ಯಾಂಕ್ 4,006 ಕೋ.ರೂ.ಗಳ ಮಾರುಕಟ್ಟೆ ಬಂಡವಳವನ್ನು ಕಳೆದುಕೊಂಡಿವೆ. ಈ ಅವಧಿಯಲ್ಲಿ ಸರಕಾರಿ ಸ್ವಾಮ್ಯದ ಬ್ಯಾಂಕುಗಳ ಸೂಚ್ಯಂಕ ಸುಮಾರು ಶೇ.10.4 ಮತ್ತು ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇ.1.5 ಕುಸಿತ ದಾಖಲಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News