ಬಿಎಸ್ಸೆನ್ನೆಲ್ ಗುತ್ತಿಗೆ ನೌಕರರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ
ಮಂಗಳೂರು, ಫೆ. 19: ಕರ್ನಾಟಕ ರಾಜ್ಯ ಬಿಎಸ್ಸೆನ್ನೆಲ್ ನಾನ್ ಪರ್ಮನೆಂಟ್ ವರ್ಕರ್ಸ್ ಯೂನಿಯನ್ (ಸಿಐಟಿಯು) ನೇತೃತ್ವದಲ್ಲಿ ಬಿಎಸ್ಸೆನ್ನೆಲ್ ಪ್ರಧಾನ ಕಚೇರಿ ಮುಂದೆ ಸೋಮವಾರ ಪ್ರತಿಭಟನಾ ಪ್ರದರ್ಶನ ನಡೆಯಿತು.
ಪ್ರತಿಭಟನಾಗಾರರನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಕಾರ್ಮಿಕರ ಜೀವನ ನಿರ್ವಹಣೆ ಮಾಡಲು ಮಾಸಿಕ ರೂ.18,000 ಕನಿಷ್ಠ ವೇತನ ನಿಗದಿಪಡಿಸಬೇಕು, ಇಎಸ್‌ಐ ಮತ್ತು ಪಿಎಫ್ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು. ಕಾರ್ಮಿಕರ ದಿನನಿತ್ಯದ ಬವಣೆಗಳು ಇಂದು ಚರ್ಚೆಯಾಗಬೇಕಿತ್ತು. ಅದು ಆಗುತ್ತಿಲ್ಲ. ಆದುದರಿಂದ ಇಂದು ಕಾರ್ಮಿಕರು ಹಲವಾರು ಸಮಸ್ಯೆಗಳಲ್ಲಿ ಮುಳುಗುವಂತಾಗಿದೆ. ಕಾರ್ಮಿಕರ ಈ ಎಲ್ಲಾ ಬೇಡಿಕೆಗಳನ್ನು ರಾಜಕೀಯವಾಗಿ ವಿಮರ್ಶೆ ಮಾಡಲು ಸಾಧ್ಯವಾಗಬೇಕು ಎಂದು ಅವರು ಹೇಳಿದರು.
ಜಿಲ್ಲಾ ಉಪಾಧ್ಯಕ್ಷರಾದ ವಸಂತ ಆಚಾರಿ ಮಾತನಾಡಿ, ಕನಿಷ್ಠ ಕೂಲಿಯನ್ನು ಏರಿಕೆ ಮಾಡಬೇಕಾದ ಸರಕಾರ ಕಾರ್ಮಿಕರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ಕಾನೂನು ಪ್ರಕಾರ ನೀಡಬೇಕಾದ ಸೌಲಭ್ಯಗಳನ್ನು ಜಾರಿ ಮಾಡುವಲ್ಲಿ ಕಾರ್ಮಿಕ ಇಲಾಖೆಗಳು ಕೂಡಾ ಮೌನ ವಹಿಸುತ್ತಿವೆ. ಆದುದರಿಂದ ಕಾರ್ಮಿಕರು ಹೋರಾಟದ ದಾರಿ ಹಿಡಿಯುವುದು ಅನಿವಾರ್ಯವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಿಎಸ್ಸೆನ್ನೆಲ್ ಕಾರ್ಮಿಕರ ಮುಂದಾಳು ಬಾಲಕೃಷ್ಣ, ಗುತ್ತಿಗೆ ಕಾರ್ಮಿಕರ ಬೇಡಿಕೆಗಳನ್ನು ವಿವರಿಸಿದರು. ಬೇಡಿಕೆಗಳ ಮನವಿಯನ್ನು ಬಿಎಸ್ಸೆನ್ನೆಲ್ ಸಂಸ್ಥೆಯ ಜನರಲ್ ಮೆನೇಜರ್ ಪರವಾಗಿ ಬಿ.ಜಿ.ಎಂ. ಸುರೇಶ್ ಸ್ವೀಕರಿಸಿದರು. ಅಲ್ಲಿಂದ ಮೆರವಣಿಗೆ ಹೊರಟು ಕೇಂದ್ರ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ ಮುಂದುಗಡೆ ಪ್ರತಿಭಟನಾ ಪ್ರದರ್ಶನ ಮಾಡಿ ಮನವಿಯನ್ನು ನೀಡಲಾಯಿತು.
ಪ್ರತಿಭಟನಾ ಪ್ರದರ್ಶನದ ನೇತೃತ್ವವನ್ನು ಯೂನಿಯನ್ ಅಧ್ಯಕ್ಷ ವಸಂತ ಆಚಾರಿ, ಉದಯ ಕುಮಾರ್, ಮೋಹನ್ ಉಡುಪಿ, ನಿತ್ಯಾನಂದ ಸುಳ್ಯ, ದೇಪ್ರಸಾದ್ ಸುಳ್ಯ, ಸೀನಪ್ಪಪುತ್ತೂರು, ದಿನೇಶ್ ಬೆಳ್ತಂಗಡಿ, ಸುನಿಲ್, ಹನೀಫ್ ಬಂಟ್ವಾಳ, ರಮೇಶ್ ಮಂಗಳೂರು ಅವರು ವಹಿಸಿದ್ದರು.
ಉದಯಕುಮಾರ್ ಸ್ವಾಗತಿಸಿದರು. ನಿತ್ಯಾನಂದ ವಂದಿಸಿದರು.