ಮಾಲ್ದೀವ್ಸ್: 12 ಪಕ್ಷಾಂತರಿ ಸಂಸದರನ್ನು ಮತ್ತೆ ಅನರ್ಹಗೊಳಿಸಿದ ಸುಪ್ರೀಂ ಕೋರ್ಟ್

Update: 2018-02-19 17:16 GMT

ಮಾಲೆ (ಮಾಲ್ದೀವ್ಸ್), ಫೆ. 19: ಮಾಲ್ದೀವ್ಸ್‌ನ ಸಂಸತ್ತಿನಲ್ಲಿ ಸೋಮವಾರ ನಡೆಯಲಿರುವ ಮಹತ್ವದ ವಿಶ್ವಾಸಮತಕ್ಕೆ ಮುನ್ನ, ಆಡಳಿತಾರೂಢ ಪಕ್ಷದಿಂದ ಪ್ರತಿಪಕ್ಷಗಳಿಗೆ ಪಕ್ಷಾಂತರಗೊಂಡಿರುವ 12 ಸಂಸದರನ್ನು ಸುಪ್ರೀಂ ಕೋರ್ಟ್ ಅನರ್ಹಗೊಳಿಸಿದೆ.

ರವಿವಾರ ರಾತ್ರಿ ನೀಡಿದ ಆದೇಶದಲ್ಲಿ ಸುಪ್ರೀಂ ಕೋರ್ಟ್, ಈ ಸಂಸದರ ಮೇಲಿನ ನಿಷೇಧವನ್ನು ತೆರವುಗೊಳಿಸುವ ತನ್ನ ಹಿಂದಿನ ಆದೇಶವನ್ನು ಹಿಂದಕ್ಕೆ ಪಡೆದುಕೊಂಡಿದೆ.

ಅಧ್ಯಕ್ಷ ಅಬ್ದುಲ್ಲಾ ಯಮೀನ್ ಘೋಷಿಸಿರುವ ತುರ್ತು ಪರಿಸ್ಥಿತಿಯನ್ನು ಅನುಮೋದಿಸಲು ಸಂಸತ್ತು ಸಭೆ ಸೇರುವ ಮುನ್ನ ಈ ಮಹತ್ವದ ಬೆಳವಣಿಗೆ ನಡೆದಿದೆ.

 ಪ್ರತಿಪಕ್ಷಗಳಿಗೆ ಪಕ್ಷಾಂತರಗೊಂಡಿರುವ ಈ 12 ಸಂಸದರ ಮೇಲಿನ ನಿಷೇಧವನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ ಫೆಬ್ರವರಿ 1ರಂದು ಆದೇಶ ನೀಡಿತ್ತು. ಇದು ಸಂಭವಿಸಿದರೆ, ಹಿಂದೂ ಮಹಾಸಾಗರದ ದ್ವೀಪ ರಾಷ್ಟ್ರದ ಸಂಸತ್ತಿನಲ್ಲಿ ಅಧ್ಯಕ್ಷ ಯಮೀನ್ ಬಹುಮತ ಕಳೆದುಕೊಳ್ಳುತ್ತಾರೆ.

ಸುಪ್ರೀಂ ಕೋರ್ಟ್‌ನ ಈ ತಿಪ್ಪರಲಾಗದಿಂದಾಗಿ 85 ಸದಸ್ಯರ ಸಂಸತ್ತಿನಲ್ಲಿ ಅಧ್ಯಕ್ಷ ಯಮೀನ್ ತನ್ನ ಬಹುಮತವನ್ನು ಉಳಿಸಿಕೊಳ್ಳುತ್ತಾರೆ.

ಬಂಧನದಲ್ಲಿರುವ 9 ಪ್ರತಿಪಕ್ಷ ನಾಯಕರನ್ನು ಬಿಡುಗಡೆ ಮಾಡುವಂತೆ ಹಾಗೂ ಆಡಳಿತಾರೂಢ ಪಕ್ಷದಿಂದ ಪ್ರತಿಪಕ್ಷಕ್ಕೆ ಪಕ್ಷಾಂತರ ಮಾಡಿರುವ 12 ಸಂಸದರ ಮಾನ್ಯತೆಯನ್ನು ಮರಳಿಸುವಂತೆ ತನ್ನ ಮೂಲ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು.

 ಆದರೆ, ಆ ತೀರ್ಪನ್ನು ಪಾಲಿಸಲು ನಿರಾಕರಿಸಿದ ಅಧ್ಯಕ್ಷ ಯಮೀನ್, ದೇಶದಲ್ಲಿ 15 ದಿನಗಳ ಅವಧಿಗೆ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. ಇದರ ಬೆನ್ನಿಗೇ ಈ ತೀರ್ಪು ನೀಡಿದ ನ್ಯಾಯಾಧೀಶರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದರು. ಇದರೊಂದಿಗೆ ದೇಶದಲ್ಲಿ ಬಿಕ್ಕಟ್ಟು ತಲೆದೋರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News