ಭಟ್ಕಳ ತಾಲೂಕು 9ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಶ್ರೀಧರ ಶೇಟ್ ಆಯ್ಕೆ

Update: 2018-02-19 18:29 GMT

ಭಟ್ಕಳ,ಫೆ.19 :ತಾಲೂಕಿನ ಚಿತ್ರಾಪುರದಲ್ಲಿ ಮಾ.1ರಂದು ನಡೆಯಲಿರುವ ಭಟ್ಕಳ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಕವಿ ಶ್ರೀಧರ ಶೇಟ್ ಶಿರಾಲಿ ಅವರನ್ನು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅವರ ಸೂಚನೆಯಂತೆ ಘೋಷಿಸಲಾಗಿದೆ ಎಂದು ತಾಲೂಕು ಕ.ಸಾ.ಪ ಅಧ್ಯಕ್ಷ ಗಂಗಾಧರ ನಾಯ್ಕ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂರು ದಶಕಗಳ ಸಾಹಿತ್ಯ ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಶ್ರೀಧರ ಶೇಟ್ ರವರ ಮೂರು ಕವನ ಸಂಕಲನಗಳು ಈಗಾಗಲೇ ಪ್ರಕಟಗೊಂಡಿವೆ. ಹಸಿವು ಸಾಯುವುದಿಲ್ಲ (ಕವನಸಂಕಲನ) ಬೇಲಿಯ ಹೂಗಳು(ಮಕ್ಕಳ ಕವನ ಸಂಕಲನ) ಬೆರಳ ಸಂದಿಯಿಂದ (ಹನಿಗವಿತೆಗಳು) ಕೃತಿಗಳು ಕಾವ್ಯಾಸಕ್ತರ ಮೆಚ್ಚುಗೆಗೆ ಪಾತ್ರವಾಗಿದ್ದು ನಾಡಿನಾದ್ಯಂತ ಜನಪ್ರಿಯವಾಗಿವೆ.

ನಾಡಿನ ಹಿರಿಯ ಸಾಹಿತಿ ಚಂಪಾ ಅವರ ಸಂಕ್ರಮಣ ಪ್ರಕಾಶನದಿಂದ ರಾಜ್ಯಮಟ್ಟದ ಸಂಕ್ರಮಣ ಕಾವ್ಯ ಪ್ರಶಸ್ತಿಗೆ ಎರಡು ಬಾರಿ ಭಾಜನರಾಗಿದ್ದಾರೆ. ಪ್ರೌಢಶಾಲಾ ಹಂತದಿಂದಲೇ ಬರವಣಿಗೆ ಆರಂಭಿಸಿದ ಶ್ರಿಧರ ಶೇಟ್ ರವರ ಅಸಂಖ್ಯ ಚುಟುಕುಗಳು, ಹನಿಗವಿತೆ, ಕಥೆಗಳನ್ನು ರಚಿಸಿದ್ದಾರೆ. ವ್ಯಂಗ್ಯಚಿತ್ರಕಾರರೂ ಆಗಿರುವ ಶ್ರೀಧರ ಶೇಟ್ ಉತ್ತಮ ಕಾರ್ಯಕ್ರಮ ನಿರೂಪಕರಾಗಿಯೂ ಗುರುತಿಸಿಕೊಂಡಿದ್ದಾರೆ.

ಸಾಹಿತ್ಯ ಕ್ಷೇತ್ರದ ಸಾಧನೆಗ ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರಾಗಿರುವ ಇವರಿಗೆ ತಾಲೂಕಾ ರಾಜ್ಯೋತ್ಸವ ಪ್ರಶಸ್ತಿ, ಉತ್ತಮ ಶಿಕ್ಷಕ ಪ್ರಶಸ್ತಿ, ಉತ್ತಮ ಕಾರ್ಯಕ್ರಮ ನಿರೂಪಕ ಪ್ರಶಸ್ತಿಗಳ ಜೊತೆಗೆ ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದೆ. ಕಾಲೇಜು ದಿನಗಳಿಂದಲೇ ಸಾಹಿತ್ಯಿಕ ಸಾಂಸ್ಕೃತಿಕ ಸಂಘಟನೆಯಲ್ಲಿ ತೊಡಗಿಸಿಕೊಂಡ ಶ್ರೀಯುತರು ಕನ್ನಡ ವಿಚಾರ ವೇದಿಕೆಯ ಕಾರ್ಯದರ್ಶಿಯಾಗಿ,ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ, ಕೋಶಾಧ್ಯಕ್ಷರಾಗಿ, ಹಣತೆ ಸಾಹಿತ್ಯ ಸಾಂಸ್ಕೃತಿಕ ಜಗಲಿಯ ಅಧ್ಯಕ್ಷರಾಗಿ, ಶಿಕ್ಷಕ ಸಂಘದ ಕಾರ್ಯದರ್ಶಿಯಾಗಿ, ಆಂಗ್ಲ ಭಾಷಾ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಸಂಘಟನೆಯಲ್ಲೂ ತೊಡಗಿಸಿಕೊಂಡಿದ್ದಾರೆ. ತಾಲೂಕಿನ ಜಾಲಿ ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿರುವ ಇವರು ಕನ್ನಡ ಮತ್ತು ಆಂಗ್ಲ ಭಾಷಾ ಪ್ರಭುತ್ವ ಹೊಂದಿದ್ದು ಇವರ ಭಾಷಾ ಶೈಲಿ ಜನಮನ್ನಣೆ ಪಡೆದಿದೆ.

ಅವರು 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಜಿಲ್ಲಾ ಕಸಾಪ ಮತ್ತು ತಾಲೂಕಾ ಕಸಾಪ ಘಟಕ ಅಭಿನಂದನೆ ಸಲ್ಲಿಸಿದೆ. ಮಾ.1 ರಂದು ಶಿರಾಲಿಯ ಚಿತ್ರಾಪುರದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನವು ಶ್ರೀಧರ ಶೇಟ್ ರವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿದ್ದು ಎಲ್ಲ ಕನ್ನಡದ ಮನಸುಗಳು ಆಗಮಿಸಿ ಸಮ್ಮೇಳನದ ಯಶಸ್ಸಿಗೆ ಸಹಕರಿಸಬೇಕಾಗಿ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News