ಸಿರಿಯ: ಬಂಡುಕೋರ ಪ್ರದೇಶದ ಮೇಲೆ ನಿರಂತರ ಬಾಂಬ್ ದಾಳಿ

Update: 2018-02-20 18:13 GMT

ಅರ್ಬಿನ್ (ಸಿರಿಯ), ಫೆ. 20: ಸಿರಿಯದ ಈಸ್ಟರ್ನ್ ಘೌಟದ ಮೇಲೆ ಸತತ ಮೂರನೆ ದಿನವಾದ ಮಂಗಳವಾರವೂ ವಾಯು ದಾಳಿ ನಡೆದಿದ್ದು, ಮೃತ ನಾಗರಿಕರ ಸಂಖ್ಯೆ 200ರ ಗಡಿಗೆ ಹತ್ತಿರವಾಗಿದೆ.

ಈ ನಡುವೆ, ಬಂಡುಕೋರ ಪ್ರದೇಶದಲ್ಲಿನ ಪರಿಸ್ಥಿತಿ ‘ನಿಯಂತ್ರಣ ಮೀರುತ್ತಿದೆ’ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.

ರವಿವಾರದಿಂದ ನಡೆಸಲಾಗುತ್ತಿರುವ ವಾಯು ದಾಳಿಗಳು ಹಾಗೂ ರಾಕೆಟ್ ಮತ್ತು ಫಿರಂಗಿ ದಾಳಿಗಳು ಬಂಡುಕೋರ ಪ್ರದೇಶವನ್ನು ನಡುಗಿಸಿವೆ. ಮುತ್ತಿಗೆಗೊಳಗಾಗಿರುವ ಪ್ರದೇಶದ ಮೇಲೆ ಭೂದಾಳಿ ನಡೆಸಲು ಸಿರಿಯ ಸರಕಾರ ಸಿದ್ಧತೆಗಳನ್ನು ನಡೆಸುತ್ತಿದೆ ಎಂಬುದಾಗಿ ಭಾವಿಸಲಾಗಿದೆ.

ನಿರಂತರ ದಾಳಿಗಳಲ್ಲಿ ಕನಿಷ್ಠ 194 ನಾಗರಿಕರು ಹತರಾಗಿದ್ದಾರೆ ಹಾಗೂ ಅವರ ಪೈಕಿ 57 ಮಕ್ಕಳು ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.

ಸೋಮವಾರ ಒಂದೇ ದಿನ ನಡೆದ ಬಾಂಬ್ ದಾಳಿಗಳಲ್ಲಿ 30 ಮಕ್ಕಳು ಸೇರಿದಂತೆ 127 ನಾಗರಿಕರು ಮೃತಪಟ್ಟಿದ್ದಾರೆ. ಈಸ್ಟರ್ನ್ ಘೌಟದಲ್ಲಿ ಒಂದೇ ದಿನದಲ್ಲಿ ಇಷ್ಟೊಂದು ಸಾವುಗಳು ಸಂಭವಿಸಿರುವುದು 4 ವರ್ಷಗಳ ಅವಧಿಯಲ್ಲೇ ಇದು ಪ್ರಥಮವಾಗಿದೆ.

ಮಂಗಳವಾರ ಬೆಳಗ್ಗೆ ಹೊಸದಾಗಿ ನಡೆದ ವಾಯು ದಾಳಿಗಳಲ್ಲಿ ಕನಿಷ್ಠ 50 ನಾಗರಿಕರು ಹತರಾಗಿದ್ದಾರೆ. ಅವರ ಪೈಕಿ 13 ಮಂದಿ ಮಕ್ಕಳು.

ಬಂಡುಕೋರರು ಈಸ್ಟರ್ನ್ ಘೌಟವನ್ನು 2012ರಿಂದ ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರೆ. ಇದು ಡಮಾಸ್ಕಸ್‌ನಲ್ಲಿ ಬಂಡುಕೋರರ ನಿಯಂತ್ರಣದಲ್ಲಿ ಉಳಿದಿರುವ ಕೊನೆಯ ಪ್ರದೇಶವಾಗಿದೆ. ಅಲ್ಲಿಗೆ ಭೂದಾಳಿ ನಡೆಸಿ ಅದನ್ನು ಮರುವಶಪಡಿಸಿಕೊಳ್ಳಲು ಅಧ್ಯಕ್ಷ ಬಶರ್ ಅಲ್ ಅಸಾದ್ ಉತ್ಸುಕರಾಗಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News