ಇರಾನ್ ವಿಮಾನದ ಅವಶೇಷಗಳು ಝಾಗ್ರೋಸ್ ಪರ್ವತದಲ್ಲಿ ಪತ್ತೆ

Update: 2018-02-20 18:25 GMT

 ಟೆಹರಾನ್, ಫೆ. 20: ಎರಡು ದಿನಗಳ ಹಿಂದೆ ಝಾಗ್ರೋಸ್ ಪರ್ವತ ಸಾಲಿನಲ್ಲಿ ನಾಪತ್ತೆಯಾಗಿದ್ದ 66 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಇರಾನ್ ವಿಮಾನದ ಅವಶೇಷಗಳು ಪತ್ತೆಯಾಗಿವೆ ಎಂದು ವಕ್ತಾರರೊಬ್ಬರು ಹೇಳಿದ್ದಾರೆ.

ವಿಮಾನದಲ್ಲಿದ್ದ ಎಲ್ಲ 66 ಮಂದಿ ಮೃತಪಟ್ಟಿದ್ದಾರೆ.

ಆಸ್ಮಾನ್ ಏರ್‌ಲೈನ್ಸ್ ವಿಮಾನ ಇಪಿ3704 ರವಿವಾರ ಬೆಳಗ್ಗೆ ಟೆಹರಾನ್‌ನಿಂದ ಹಾರಾಟ ಆರಂಭಿಸಿದ ಸುಮಾರು 45 ನಿಮಿಷಗಳ ಬಳಿಕ ಝಾಗ್ರೋಸ್ ಪರ್ವತ ಸಾಲಿನಲ್ಲಿ ನಾಪತ್ತೆಯಾಗಿತ್ತು.

ಎರಡು ದಿನಗಳ ಭಾರೀ ಹಿಮಪಾತದ ಬಳಿಕ ಮಂಗಳವಾರ ಬೆಳಗ್ಗೆ ಹವಾಮಾನ ಸುಧಾರಿಸಿದ ಹಿನ್ನೆಲೆಯಲ್ಲಿ, ಹೆಲಿಕಾಪ್ಟರ್‌ನಲ್ಲಿ ಶೋಧ ನಡೆಸುತ್ತಿದ್ದ ತಂಡಗಳಿಗೆ ಅವಶೇಷಗಳು ಗೋಚರಿಸಿದವು.

‘‘ಇಂದು ಬೆಳಗ್ಗೆ ರೆವಲೂಶನರಿ ಗಾರ್ಡ್ಸ್ ಹೆಲಿಕಾಪ್ಟರ್‌ಗಳು ವಿಮಾನದ ಅವಶೇಷಗಳನ್ನು ದೇನಾ ಪರ್ವತದಲ್ಲಿ ಪತ್ತೆಹಚ್ಚಿದವು’’ ಎಂದು ವಿಮಾನ ಕಂಪೆನಿಯ ವಕ್ತಾರ ರಮಝಾನ್ ಶರೀಫ್ ಸರಕಾರಿ ಟಿವಿ ಐಆರ್‌ಐಬಿಗೆ ತಿಳಿಸಿದರು.

‘‘ನಾನು ವಿಮಾನದ ಅವಶೇಷಗಳನ್ನು ದೇನಾ ಪರ್ವತದಲ್ಲಿ ತಳದಿಂದ ಸುಮಾರು 4000 ಮೀಟರ್ ಎತ್ತರದಲ್ಲಿ ನೊಘೊಲ್ ಗ್ರಾಮದಲ್ಲಿ ನೋಡಿದ್ದೇನೆ ಹಾಗೂ ಮೃತದೇಹಗಳು ವಿಮಾನದ ಸುತ್ತ ಚದುರಿದ್ದವು’’ ಎಂದು ಐಆರ್‌ಐಬಿಯ ವರದಿಗಾರರೊಬ್ಬರು ತಿಳಿಸಿದರು.

1993ರಿಂದ ಹಾರಾಟ ನಡೆಸುತ್ತಿರುವ ಎಟಿಆರ್-72 ಅವಳಿ ಇಂಜಿನ್ ವಿಮಾನ ರವಿವಾರ ಮುಂಜಾನೆ ಮೆಹ್ರಾಬಾದ್ ವಿಮಾನ ನಿಲ್ದಾಣದಿಂದ 500 ಕಿ.ಮೀ. ದೂರದಲ್ಲಿರುವ ಯಸುಜಿ ನಗರಕ್ಕೆ ಹಾರುತ್ತಿದ್ದಾಗ ದುರಂತ ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News