ತಪ್ಪೆಸಗಿದವರ ವಿರುದ್ಧ ಕಠಿಣ ಕ್ರಮಕ್ಕೆ ಶಾಸಕ ಲೋಬೊ ನಿರ್ದೇಶನ

Update: 2018-02-21 08:48 GMT

ಮಂಗಳೂರು, ಫೆ. 20: ಕಸ್ಬಾ ಬೆಂಗ್ರೆಯಲ್ಲಿ ನಿನ್ನೆ ರಾತ್ರಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಜೆ.ಆರ್. ಲೋಬೊ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನಿನ್ನೆ ಉಡುಪಿಯಲ್ಲಿ ನಡೆದ ಮೀನುಗಾರರ ಸಮಾವೇಶ ಮುಗಿಸಿ ರಾತ್ರಿ ಬಸ್ಸುಗಳಲ್ಲಿ ಹಿಂತಿರುಗುತ್ತಿದ್ದ ವೇಳೆ ಕಸ್ಬಾ ಬೆಂಗ್ರೆ ಬಳಿ ಅಹಿತಕರ ಘಟನೆ ನಡೆದಿದೆ. ನಾಲ್ಕು ಬಸ್ಸುಗಳು ಸುರಕ್ಷಿತವಾಗಿ ಆ ಪ್ರದೇಶದಿಂದ ಹಾದು ಹೋಗಿದ್ದು, 5ನೆ ಬಸ್ ಹಾದು ಹೋಗುವ ವೇಳೆ ಕೆಲ ದುಷ್ಕರ್ಮಿಗಳು ಘೋಷಣೆಗಳನ್ನು ಕೂಗಿ, ಕಲ್ಲು ತೂರಾಟ ನಡೆಸಿ, ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ಸ್ಥಳದಲ್ಲಿ ಸ್ಥಳೀಯರು ಜಮಾಯಿಸಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ತೋಟಬೆಂಗ್ರೆ ಮತ್ತು ಕಸ್ಬಾ ಬೆಂಗ್ರೆಯ ಮುಖಂಡರು ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಿದ್ದಾರೆ. ಆದರೆ ಈ ಘರ್ಷಣೆಗೆ ಯಾರು ಕಾರಣವೋ ಅವರ ಮೇಲೆ ಅಧಿಕಾರಿಗಳು ಮುಲಾಜಿಲ್ಲದೆ ಕ್ರಮ ಕೈಗೊಳ್ಲಬೇಕು. ಇಂತಹ ಘಟನೆ ಮತ್ತೆ ಮರುಕಳಿಸಬಾರದು ಎಂದು ಶಾಸಕ ಲೋಬೊ ಹೇಳಿದರು.

ಪ್ರಸ್ತುತ ಎರಡೂ ಪ್ರದೇಶಗಳ ಮುಖಂಡರು ಸ್ಥಳೀಯ ಮಟ್ಟದಲ್ಲಿ ಶಾಂತಿ ಸಭೆಗಳನ್ನು ನಡೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದಾರೆ. ಮುಖಂಡರಾದ ಮೋಹನ್ ಬೆಂಗ್ರೆ, ಚೇತನ್ ಬೆಂಗ್ರೆ, ಶೇಖರ್ ಸುವರ್ಣ, ಆಸಿಫ್, ಅಸ್ಲಾಂ, ಸುಲೈಮಾನ್ ಮೊದಲಾದ ನಾಯಕರು ತಕ್ಷಣ ಶಾಂತಿ ಕಾಪಾಡುವಲ್ಲಿ ಸಹಕರಿಸಿದ್ದಾರೆ. ಈ ಪ್ರದೇಶಕ್ಕೆ ತಾನು ಇಂದು ಬೆಳಗ್ಗೆ ಭೇಟಿ ನೀಡಿದ್ದೇನೆ ಎಂದು ಅವರು ಹೇಳಿದರು.

ಸಮಸ್ಯೆಯನ್ನು ಬಗೆಹರಿಸಲಾಗಿದ್ದು, ಇದಕ್ಕೆ ರಾಜಕೀಯ ಬಣ್ಣ ಹಚ್ಚುವ ಅಗತ್ಯ ಇಲ್ಲ. ಚುನಾವಣೆ ಹಿನ್ನೆಲೆಯಲ್ಲಿ ಇಂತಹ ಶಾಂತಿ ಕದಡುವ ಯತ್ನ ಬೇಡ. ರಕ್ತ ಸುರಿಸಿ ಚುನಾವಣೆ ಎದುರಿಸುವುದು ಬೇಡ ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಕೆಎಸ್‌ಆರ್‌ಟಿಸಿ ನಿರ್ದೇಶಕ ಟಿ.ಕೆ. ಸುಧೀರ್, ಕಾರ್ಪೊರೇಟರ್ ವಿನಯ ರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸಲೀಂ, ಕಾಂಗ್ರೆಸ್ ನಾಯಕರಾದ ಮೋಹನ್ ಮೆಂಡನ್, ರಮಾನಂದ ಪೂಜಾರಿ, ಚೇತನ್ ಉರ್ವ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News