×
Ad

ಕಾರ್ಕಳ ದರೋಡೆ ಪ್ರಕರಣ: ಮತ್ತಿಬ್ಬರ ಬಂಧನ

Update: 2018-02-21 21:00 IST

ಕಾರ್ಕಳ, ಫೆ. 21: ಕಾರ್ಕಳ ಬಂಗ್ಲೆಗುಡ್ಡೆಯ ಮನೆ ದರೋಡೆ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳು ಸೇರಿದಂತೆ ಮತ್ತೆ ಇಬ್ಬರನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.

ಕಾಪು ಕೋಟೆ ರಸ್ತೆಯ ಅಝರುದ್ದೀನ್(25) ಹಾಗೂ ಆತನ ಸ್ನೇಹಿತ ಶಿರ್ವ ಕುತ್ಯಾರಿನ ಮುಹಮ್ಮದ್ ಅಝರುದ್ದೀನ್ ಯಾನೆ ಮಂಚಕಲ್ ಅಝರುದ್ದೀನ್ (32) ಬಂಧಿತ ಆರೋಪಿಗಳು.

ಅವರು ಭಟ್ಕಳ, ಕುಂದಾಪುರ, ಉಡುಪಿ ಮತ್ತು ಕಾರ್ಕಳದಲ್ಲಿ ಹಲವು ಕಳ್ಳತನ, ಸರಗಳ್ಳತನ ಹಾಗೂ ಈ ಹಿಂದೆ ಹೆದ್ದಾರಿ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರೆಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಅಲ್ಲದೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಮಂಕಿ, ಭಟ್ಕಳ, ಉಡುಪಿ ಜಿಲ್ಲೆಯ ಕುಂದಾಪುರ, ಮಣಿಪಾಲ, ಕಾಪು, ಹಿರಿಯಡ್ಕಕ ಮತ್ತು ಮಂಗಳೂರು ನಗರದ ಬಂದರ್ ಠಾಣೆ ವ್ಯಾಪ್ತಿಯ ಪ್ರಕರಣಗಳಲ್ಲಿ ಕಳೆದ ಮೂರು ನಾಲ್ಕು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರು.

ಕಾಪು ಅಝರುದ್ದೀನ್‌ನಿಂದ ಕಾರ್ಕಳ ದರೋಡೆ ಪ್ರಕರಣದ ಚಿನ್ನಾಭರಣಗಳ ಪೈಕಿ 21 ಸಾವಿರ ರೂ. ಮೌಲ್ಯದ 7 ಗ್ರಾಂ ತೂಕದ ಚಿನ್ನದ ಬೆಂಡೋಲೆ ಹಾಗೂ ಕಾಪು ಪೇಟೆಯಲ್ಲಿ ಸರಗಳ್ಳತನ ಮಾಡಲು ಬಳಸಿದ್ದ 2 ಲಕ್ಷ ರೂ. ಮೌಲ್ಯದ ಬೈಕ್‌ನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತರ ಸಂಖ್ಯೆ ಎಂಟಕ್ಕೆ: ಫೆ.4ರಂದು ಕಾರ್ಕಳ ಬಂಗ್ಲೆಗುಡ್ಡೆಯ ಯಶೋಧ ಭಟ್ ಎಂಬವರ ಮನೆಗೆ ನುಗ್ಗಿ, ಹಲ್ಲೆ ನಡೆಸಿ 21ಪವನ್ ಚಿನ್ನಾಭರಣ ಹಾಗೂ ಒಂದು ಲಕ್ಷ ರೂ. ನಗದು ದರೋಡೆ ಪ್ರಕರಣದ ತನಿಖೆ ನಡೆಸಿದ ಕಾರ್ಕಳ ಹಾಗೂ ಕಾಪು ಪೊಲೀಸರು ಈವರೆಗೆ ಒಟ್ಟು ಎಂಟು ಮಂದಿಯನ್ನು ಬಂಧಿಸಿದ್ದಾರೆ.

ಕಾರ್ಕಳ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರು ಮಂದಿಯ ಪೈಕಿ ಸಾಜಿದ್ ರಹ್ಮಾನ್(19) ಮತ್ತು ಅಮೀರುದ್ದೀನ್(27)ನನ್ನು ಫೆ.12ರಂದು ಹಾಗೂ ಮಾರೂಫ(21) ಮತ್ತು ನಟರಾಜ ಮೊಗೇರ(24)ನನ್ನು ಫೆ.15ರಂದು ಕಾರ್ಕಳ ಪೊಲೀಸರು ಬಂಧಿಸಿದ್ದರು. ಇದೀಗ ಪ್ರಮುಖ ಆರೋಪಿ ಕಾಪು ಅಝರುದ್ದೀನ್ ಸೇರಿದಂತೆ ಒಟ್ಟು ಐದು ಮಂದಿಯನ್ನು ಬಂಧಿಸಲಾಗಿದೆ. ಓರ್ವ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಕಾಪು ಅಝರುದ್ದೀನ್‌ನಿಂದ ದರೋಡೆ ಮಾಡಿದ ಚಿನ್ನಾಭರಣಗಳನ್ನು ಪಡೆದುಕೊಂಡು, ಸೊಸೈಟಿಯಲ್ಲಿ ಅಡವಿಟ್ಟು ನಂತರ ಸಾಲ ಪಡೆದುಕೊಂಡ ಅಝರುದ್ದೀನ್ ತಾಯಿ ಹಾಗೂ ಸಹೋದರಿಯನ್ನು ಪೊಲೀಸರು ಫೆ.16ರಂದು ಬಂಧಿಸಿದ್ದರು. ಇದೀಗ ಅವರಿಬ್ಬರು ಮಂಗಳೂರು ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮಂಚಕಲ್ ಅಝರುದ್ದೀನ್ ಕಾರ್ಕಳ ದರೋಡೆ ಪ್ರಕರಣದ ಆರೋಪಿಯಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಹಲವು ಕಳ್ಳತನ ಪ್ರಕರಣಗಳಲ್ಲಿ ಹಾಗೂ ಕಾರ್ಕಳ ದರೋಡೆ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಈವರೆಗೆ ಬಂಧಿಸಲ್ಪಟ್ಟ ಒಟ್ಟು ಎಂಟು ಆರೋಪಿಗಳಿಂದ 11 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಇತರ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪೊಲೀಸ್ ತಂಡಕ್ಕೆ ಬಹುಮಾನ ಘೋಷಣೆ
ಹಲವು ವರ್ಷಗಳಿಂದ ವಾರಂಟ್ ಹಾಗೂ ಪ್ರೊಕ್ಲಮೇಶನ್ ಇದ್ದರೂ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ತಿರುಗುತ್ತಿದ್ದ ಆರೋಪಿ ಗಳನ್ನು ಬಂಧಿಸಿದ ಕಾರ್ಕಳ ಹಾಗೂ ಕಾಪು ಪೊಲೀಸ್ ಅಪರಾಧ ತಂಡಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಗಿ ಬಹುಮಾನ ಘೋಷಿಸಿದ್ದಾರೆ.

ಈ ಕಾರ್ಯಾಚರಣೆಯನ್ನು ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕ ಹೃಷಿಕೇಷ್ ಸೋನವಾಣೆ ಮಾರ್ಗದರ್ಶನದಲ್ಲಿ ಕಾರ್ಕಳ ವೃತ್ತ ನಿರೀಕ್ಷಕ ಜಾಯ್ ಅಂತೋನಿ ಹಾಗೂ ವೃತ್ತದ ಅಪರಾಧ ಪತ್ತೆ ಸಿಬ್ಬಂದಿಗಳಾದ ರಾಜೇಶ್, ಪ್ರಶಾಂತ್, ಗಿರೀಶ್, ರಾಘವೇಂದ್ರ, ಘನಶ್ಯಾಮ, ಭೀಮಪ್ಪಉಗಾರೆ ಹಾಗೂ ಚಾಲಕರಾದ ಪ್ರಶಾಂತ್, ಲಿಂಗಪ್ಪಗೌಡ ಭಾಗವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News