ಹಿರಿಯಡ್ಕ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿಯನ್ನು ವೀಕ್ಷಿಸಿದ ಡಾ.ಹೆಗ್ಗಡೆ
ಉಡುಪಿ, ಫೆ.21: ಸಂಪ್ರದಾಯ, ಪರಂಪರೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಅಭೂತಪೂರ್ವ ಕಾರ್ಯ ಶ್ರೀಕ್ಷೇತ್ರ ಹಿರಿಯಡ್ಕದಲ್ಲಿ ನಡೆಯುತ್ತಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಹಿರಿಯಡಕದಲ್ಲಿ ಬಿರುಸಿನಿಂದ ಸಾಗಿರುವ ಮಹತೋಭಾರ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದ ಜೀರ್ಣೋದ್ದಾರ ಕಾಮಗಾರಿಯನ್ನು ವೀಕ್ಷಿಸಿದ ಡಾ.ಹೆಗ್ಗಡೆ ಅಲ್ಲಿ ಸೇರಿದ ಭಕ್ತರನ್ನುದ್ದೇಶಿಸಿ ಮಾತನಾಡುತ್ತಿದ್ದರು. ಶ್ರೀಕ್ಷೇತ್ರ ಹಿರಿಯಡಕ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳದ ನಡುವಿನ ಸಂಬಂಧವನ್ನು ಅವರು ನೆನಪಿಸಿಕೊಂಡರು.
ದೇವಸ್ಥಾನ ನಿರ್ಮಾಣದ ಕನ್ಸಲ್ಟೆಂಟ್ ಇಂಜಿನಿಯರ್ ಕುತ್ಯಾರ್ ಪ್ರಸಾದ್ ಅವರು ನಿರ್ಮಾಣ ಹಂತದ ಕಾಮಗಾರಿಗಳನ್ನು ವಿವರಿಸಿದರು. ಬಳಿಕ ನಡೆದ ಸಭೆಯಲ್ಲಿ ಕಾಪು ಶಾಸಕ ಹಾಗೂ ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷ ವಿನಯಕುಮಾರ್ ಸೊರಕೆ, ಕಾರ್ಯಾಧ್ಯಕ್ಷ ಗೋವರ್ಧನದಾಸ್ ಹೆಗ್ಡೆ, ಲಕ್ಷ್ಮೀನಾರಾಯಣ ತಂತ್ರಿ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಹರ್ಷವರ್ಧನ ಹೆಗ್ಡೆ ಪಡ್ದಮ್, ಸುಭಾಶ್ಚಂದ್ರ ಹೆಗ್ಡೆ ಅಂಜಾರ್‌ಬೀಡು, ಕಾರ್ಯದರ್ಶಿ ಅಮರನಾಥ ಶೆಟ್ಟಿ ಅಲ್ಲದೇ ತಂತ್ರಿ ವರ್ಗ, ಅರ್ಚಕರು, ಸಿಬ್ಬಂದಿಗಳು, ಇತರ ಜೀರ್ಣೋದ್ದಾರ ಸಮಿತಿ ಸದಸ್ಯರು ಹಾಗೂ ಊರಪರ ವೂರ ಭಕ್ತಾಭಿಮಾನಿ ಗಳು ಉಪಸ್ಥಿತರಿದ್ದರು.