×
Ad

ಸ್ಕಾನಿಂಗ್ ಕೇಂದ್ರಗಳಲ್ಲಿ ಇಮೇಜ್ ಸ್ಟೋರ್ ಕಡ್ಡಾಯ:ಡಾ.ರೋಹಿಣಿ

Update: 2018-02-21 21:20 IST

ಉಡುಪಿ, ಫೆ.21: ಸ್ಕಾನಿಂಗ್ ಸೆಂಟರ್‌ಗಳಲ್ಲಿ ಇಮೇಜ್ ಸ್ಟೋರ್ ಮಾಡುವುದು ಸಾಧ್ಯವಿಲ್ಲ ಎಂದಾದರೆ ಅಂತಹ ಸ್ಕಾನಿಂಗ್ ಸೆಂಟರ್‌ಗಳಿಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ ತಿಳಿಸಿದ್ದಾರೆ.

ಬುಧವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಡಾ.ಪ್ರತಾಪ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾಯಿದೆ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡುತಿದ್ದರು.

ಕಡ್ಡಾಯವಾಗಿ ಎಲ್ಲಾ ಸ್ಕಾನಿಂಗ್ ಕೇಂದ್ರಗಳಲ್ಲಿ ಸ್ಕಾನ್ ಮಾಡಿದ ಇಮೇಜ್ ಗಳನ್ನು ಎರಡು ವರ್ಷಗಳ ಕಾಲಾವಧಿಗೆ ಕಾಯ್ದಿರಿಸಲು ತಾಂತ್ರಿಕ ವ್ಯವಸ್ಥೆ ಇರಬೇಕು. ಅಂತಹ ವ್ಯವಸ್ಥೆ ಇಲ್ಲದಿದ್ದರೆ ಸ್ಕಾನಿಂಗ್ ಸೆಂಟರ್ ವಿರುದ್ದ ಕಠಿಣ ಕ್ರು ಕೈಗೊಳ್ಳಲಾಗುವುದು ಎಂದರು.

 ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ ಒಂದು ಸಮೀಕ್ಷೆಯನ್ನು ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಈ ಬಗ್ಗೆ ಇಲಾಖೆಗೆ ದೊರೆತ ಮಾಹಿತಿಯನ್ವಯ ನಿಗದಿತ ಪ್ರದೇಶಗಳನ್ನು ಗಮನದಲ್ಲಿರಿಸಿ ರ್ಯಾಂಡಮ್ ಸಮೀಕ್ಷೆ ಮಾಡುವ ಬಗ್ಗೆಯೂ ಡಿಎಚ್‌ಒ ಸಂಬಂಧಪಟ್ಟವರಿಗೆ ಸೂಚನೆಗಳನ್ನು ನೀಡಿದರು.

ಈಗಾಗಲೇ ಎಲ್ಲ ಸ್ಕಾನಿಂಗ್ ಸೆಂಟರ್‌ಗಳಿಗೆ ಈ ಬಗ್ಗೆ ಸಾಕಷ್ಟು ಮಾಹಿತಿ ಗಳನ್ನು ನೀಡಲಾಗಿದೆ. ಮುಂದಿನ ಭೇಟಿಯ ವೇಳೆ ಈ ಲೋಪಗಳು ಕಂಡು ಬಂದರೆ ದಂಡ ಹಾಕುವುದರ ಜೊತೆಗೆ ಕಾನೂನುರೀತಿ ಕ್ರಮ ಕೈಗೊಳ್ಳಲಾ ಗುವುದು ಎಂದು ಜಿಲ್ಲಾ ಪರಿಶೀಲನಾ ಮತ್ತು ತಪಾಸಣಾ ಸಮಿತಿ ಅಧ್ಯಕ್ಷ ಡಾ.ರಾಮರಾವ್ ಸ್ಪಷ್ಟಪಡಿಸಿದರು.

ಕಾಯ್ದೆಯನ್ವಯ ಲೋಪಗಳನ್ನು ಸಹಿಸಲಾಗುವುದಿಲ್ಲ ಎಂದು ಸ್ಪಷ್ಟ ಪಡಿಸಿದ ಅವರು, ಸ್ಕಾನಿಂಗ್ ಸೆಂಟರ್ ನಡೆಸುವವರು ಗೊತ್ತಿರಲಿಲ್ಲ ಎಂದು ಹೇಳು ವುದು ಸಕಾರಣವೆಂದು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದರು. ಸಲಹಾ ಸಮಿತಿ ಸದಸ್ಯ ಡಾ.ಸುನಿಲ್ ಮುಂಡ್ಕೂರು, ತಾಲೂಕು ಆರೋಗ್ಯಾಧಿಕಾರಿ ಡಾ. ನಾಗರತ್ನ, ಡಾ.ಸಂದೀಪ್ ಕುಡ್ವ, ಸುಬ್ರಹ್ಮಣ್ಯ ಶೇರಿಗಾರ್, ಜ್ಯೋತಿ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News