ಉಡುಪಿ: ಎಸ್‌ಸಿಎಸ್‌ಪಿ, ಟಿಎಸ್‌ಪಿ ಪ್ರಗತಿ ಪರಿಶೀಲನಾ ಸಭೆ
ಉಡುಪಿ, ಫೆ.21:ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಯಡಿ 2017-18 ನೇ ಸಾಲಿಗೆ ನಿಗದಿಪಡಿಸಿದ ಗುರಿಯನ್ನು ಇಲಾಖೆಗಳು ಸಾಧಿಸಿದ್ದು, ಕೆಆರ್‌ಐಡಿಎಲ್ ಇನ್ನಷ್ಟು ಕಾಮಗಾರಿಗಳನ್ನು ವೇಗವಾಗಿ ಮಾಡಬೇಕೆಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಅಯೋಜಿಸಲಾದ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾರ್ಯಕ್ರಮಗಳ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ ಸಾರಿಗೆ ಕೃಷಿ ಇಲಾಖೆ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯನ್ನೊಳಗೊಂಡಂತೆೆ ಹಲವು ಇಲಾಖೆಗಳು ನಿಗದಿತ ಗುರಿ ಸಾಧನೆ ಮಾಡಿದ್ದು, ಕೆಲವು ಕೊರಗ ಸಮುದಾಯ ದ ಮಕ್ಕಳಿಗೆ ಸ್ಕಾಲರ್‌ಷಿಪ್ ಸಿಗದಿರುವ ಬಗ್ಗೆ ಬಂದ ಮಾಹಿತಿಯ ಕೂಲಂಕಷ ಪರಿಶೀಲನೆ ನಡೆಸಿದರು.
ಆನ್‌ಲೈನ್ ಮೂಲಕ ವಿದ್ಯಾರ್ಥಿ ವೇತನ ಪಾವತಿಯಾಗುತ್ತಿದ್ದು, ಇದರಲ್ಲಿ ಲೋಪ ಸಂಭವಿಸಿದರೆ ಶಾಲಾ ಮುಖ್ಯಸ್ಥರೇ ಇದಕ್ಕೆ ಹೊಣೆಯಾಗುತ್ತಾರೆ ಎಂದು ಎಚ್ಚರಿಸಿದ ಜಿಲ್ಲಾಧಿಕಾರಿ, ಈ ಸಂಬಂದ ಮೀಸಲಿಟ್ಟ ಹಣದ ವಿನಿಯೋಗಕ್ಕೆ ಕಾರ್ಯಾಗಾರ ಆಯೋಜಿಸಿ ಮಾಹಿತಿ ನೀಡಲಾಗಿದೆ. ಅಭಿವೃದ್ಧಿಗೆ ಮೀಸಲಿಟ್ಟ ಹಣ ಲೋಪವಾಗುವಂತಿಲ್ಲ ಎಂದು ಸ್ಪಷ್ಟವಾದ ನಿರ್ದೇಶನ ನೀಡಿದರು.
ಗ್ರಾಮೀಣಾಭಿವೃದ್ಧಿ ಇಲಾಖೆ, ಕೆಆರ್‌ಐಡಿಎಲ್, ಪಿಡಬ್ಲ್ಯುಡಿ ಇಲಾಖೆಗಳು ಕೈಗೊಂಡಿರುವ ಕಾಮಗಾರಿಗಳ ಅಭಿವೃದ್ಧಿಯನ್ನು ಸಭೆಯಲ್ಲಿ ಪರಿಶೀಲಿಸಿದರು. ಹೊರ್ಲಾಳಿಯಲ್ಲಿ ಸಮಗ್ರ ಕೃಷಿ ಸಂಬಂಧ ಇಲಾಖೆಗಳು ಕೈಗೊಂಡಿರುವ ಕ್ರಮಗಳ ಬಗ್ಗೆ, ನೀರಾವರಿಗೆ ಹಮ್ಮಿಕೊಂಡಿರುವ ಯೋಜನೆಗಳ ಬಗ್ಗೆಯೂ ಬೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು.
ಸಭೆಯಲ್ಲಿ ಜಿಪಂ ಸಿಇಒ ಶಿವಾನಂದ ಕಾಪಶಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.