ಸಹಕಾರ ಸಂಘಗಳ ಆದಾಯ ತೆರಿಗೆ ಸಮಸ್ಯೆ ಬಗೆಹರಿಸುವಂತೆ ಅಮಿತ್ ಶಾಗೆ ಮನವಿ
ಉಡುಪಿ, ಫೆ.21: ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯ ಕೆನರಾ ಕೋ-ಆಪರೇಟಿವ್ ಅಸೋಸಿಯೇಶನ್ ವತಿಯಿಂದ ಸಹಕಾರ ಸಂಘಗಳ ಆದಾಯ ತೆರಿಗೆ ಸಮಸ್ಯೆಗಳ ಕುರಿತ ಮನವಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಇಂದು ಸಲ್ಲಿಸಲಾಯಿತು.
ರಾಜ್ಯದ ಸಹಕಾರ ಸಂಘಗಳಿಗೆ ಅವುಗಳ ವ್ಯವಹಾರದ ಆದಾಯದ ಮೇಲೆ ಆದಾಯ ತೆರಿಗೆ ಕಾಯ್ದೆಯಡಿ ನ್ಯಾಯಬದ್ಧವಾಗಿ ಸಿಗಬೇಕಾದ ಕಾಯ್ದೆ ಕಲಂ 80 ಪಿ ವಿನಾಯಿತಿಯನ್ನು ನೀಡಬೇಕು. ಸಹಕಾರ ಸಂಘಗಳು, ಸಹಕಾರಿ ಬ್ಯಾಂಕ್ ಹಾಗೂ ವಾಣಿಜ್ಯ ಬ್ಯಾಂಕುಗಳಲ್ಲಿ ವಿನಿಯೋಗಿಸಿರುವ ಹೂಡಿಕೆಯ ಬಡ್ಡಿ ಮೇಲಿನ ತೆರಿಗೆ ವಿನಾಯಿತಿಯನ್ನು ವಿವಿಧ ರಾಜ್ಯಗಳ ಹೈಕೋರ್ಟಿನ ತೀರ್ಪಿನ ಹೊರತಾಗಿಯೂ ಆದಾಯ ತೆರಿಗೆ ಇಲಾಖಾಧಿಕಾರಿಗಳು ಕರ ನಿರ್ಧರಣೆ ವೇಳೆ ನಿರಾಕರಿಸುತ್ತಿರುವುದಾಗಿ ಮನವಿಯಲ್ಲಿ ತಿಳಿಸಲಾಗಿದೆ.
ಮನವಿಯ ಪ್ರತಿಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರಿಗೂ ಸಹ ಸಲ್ಲಿಸಲಾಯಿತು. ಮನವಿಯನ್ನು ಕೂಡಲೇ ವಿತ್ತ ಇಲಾಖೆಗೆ ಕಳುಹಿಸಿಕೊಟ್ಟು ಅದನ್ನು ಪರಿಶೀಲಿಸಿ ಸಮಸ್ಯೆ ನಿವಾರಿಸಲು ಸೂಚಿಸುವುದಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷರು ಈ ಸಂದಭರ್ ದಲ್ಲಿ ಭರವಸೆಯನ್ನು ನೀಡಿದರು.
ಸಂಸ್ಥೆಯ ಅಧ್ಯಕ್ಷ ಗೋಪಿಕೃಷ್ಣ ರಾವ್, ಪ್ರಧಾನ ಕಾರ್ಯದರ್ಶಿ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಬಿಜೆಪಿ ಮುಖಂಡರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಕಿದಿ ಯೂರು ಉದಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.