ಅಕ್ಷತಾ ಹತ್ಯೆ: ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಕರ್ನಾಟಕ ಖಂಡನೆ
ಮಂಗಳೂರು, ಫೆ. 21: ಸುಳ್ಯದಲ್ಲಿ ನಡೆದ ಅಕ್ಷತಾರ ಹತ್ಯೆಯು ಭಗ್ನ ಪ್ರೇಮಿಯೋರ್ವನ ಹತಾಶ ಕೃತ್ಯ ಎಂಬ ಷರಾದೊಂದಿಗೆ ಮುಗಿದುಹೋಗಬಾರದು. ಇದು ಖಂಡನಾರ್ಹ ಕೃತ್ಯ ಎಂದು ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷೆ ಶಹನಾಝ್ ತಿಳಿಸಿದ್ದಾರೆ.
ಮಾಧ್ಯಮಗಳು, ಸಿನಿಮಾಗಳು, ಜಾಹೀರಾತುಗಳು, ಗಾನಗೋಷ್ಠಿಗಳು ಎಲ್ಲವೂ ಹೆಣ್ಣು- ಗಂಡು ನಡುವಿನ ಆಕರ್ಷಣೆಯನ್ನೇ ಕೇಂದ್ರವಾಗಿಟ್ಟುಕೊಂಡು ಮತ್ತು ಅದನ್ನು ಬೆಂಬಲಿಸಿಕೊಂಡು ಬರುತ್ತಿವೆ. ಹೀಗಿರುವಾಗ ಕೇವಲ ಕಾರ್ತಿಕ್ ನನ್ನ ಜೈಲಿಗಟ್ಟುವುದರಿಂದ ಇತರ ಅಕ್ಷತಾರ ಉಳಿವು ಸಾಧ್ಯ ಎಂದು ಹೇಳಲಾಗದು. ಇದು ಸಮಸ್ಯೆಯ ಮೇಲು ಮೇಲಿನ ಪರಿಹಾರವಷ್ಟೇ. ನೈತಿಕವಾಗಿ ಸಮಾಜವನ್ನು ಎತ್ತರಕ್ಕೊಯ್ಯದ ಹೊರತು ಹೆಣ್ಣು ಮಕ್ಕಳು ಸುರಕ್ಷಿತರಾಗುವುದು ಸಾಧ್ಯವಿಲ್ಲ. ಆದ್ದರಿಂದ ಕಾರ್ತಿಕ್ ಗೆ ಕಠಿಣ ಶಿಕ್ಷೆಯಾಗುವುದರ ಜೊತೆಗೆ ಕಾರ್ತಿಕ್ ರನ್ನು ತಯಾರಿಸುವ ಇಂದಿನ ಸಾಮಾಜಿಕ ವಾತಾವರಣಕ್ಕೂ ಕಡಿವಾಣ ಹಾಕಬೇಕಾದ ಅಗತ್ಯವಿದೆ ಎಂದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.