ಮಂಗಳೂರು ವಿವಿಯಲ್ಲಿ ‘ಕ್ಯಾಂಪಸ್ ಬರ್ಡ್ ಕೌಂಟ್’ ಕಾರ್ಯಕ್ರಮ
ಮಂಗಳೂರು, ಫೆ.21: ಬರ್ಡ್ ಕೌಂಟ್ ಇಂಡಿಯಾ ಸಂಸ್ಥೆಯು ಸಂರಕ್ಷಿತ ಅರಣ್ಯಗಳ ಹೊರಗಿನ ಪಕ್ಷಿ ಸಂಕುಲದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ದೇಶಾದ್ಯಂತ ಪ್ರತೀ ವರ್ಷ ‘ಹಕ್ಕಿ ಗಣತಿ’ ನಡೆಸುತ್ತಿದ್ದು, ಮಂಗಳೂರು ವಿವಿ ಕಳೆದ ಮೂರು ವರ್ಷಗಳಿಂದ ಇದರಲ್ಲಿ ಪಾಲ್ಗೊಳ್ಳುತ್ತಿವೆ.
ಈ ಬಾರಿ ದೇಶಾದ್ಯಂತ 230 ಕ್ಯಾಂಪಸ್‌ಗಳು ಈ ಗಣತಿಯಲ್ಲಿ ಪಾಲ್ಗೊಂಡಿವೆ. ರಾಜ್ಯದ 23 ಕ್ಯಾಂಪಸ್‌ಗಳಲ್ಲಿ ಬರ್ಡ್ ಕೌಂಟ್ ನಡೆದಿದೆ. ಮಂಗಳೂರು ವಿವಿಯು 2016ರಲ್ಲಿ ನಡೆಸಿದ ಗಣತಿಯಲ್ಲಿ 77 ಪ್ರಭೇದದ 2017ರಲ್ಲಿ 95 ಪ್ರಭೇದದ ಹಕ್ಕಿಗಳನ್ನು ದಾಖಲಿಸಿತ್ತು. ಈ ಬಾರಿಯ ಗಣತಿಯಲ್ಲಿ ಸಂಶೋಧನಾ ವಿದ್ಯಾರ್ಥಿ ವಿನೀತ್ ಕುಮಾರ್‌ರ ಮಾರ್ಗದರ್ಶನದಲ್ಲಿ ಜಗದೀಶ್ ಪೈಟನ್ಕರ್ ( ಸಂಶೋಧನಾ ವಿದ್ಯಾರ್ಥಿ), ಭಾಗ್ಯ ಯು.ಜೆ. (ಎಂಎಸ್ಸಿ ವಿದ್ಯಾರ್ಥಿ), ಡೊನಾಲ್ಡ್ ಪ್ರೀತಮ್ (ಎಂಎಸ್ಸಿ ವಿದ್ಯಾರ್ಥಿ) ಜೊತೆಗೂಡಿ ಗಣತಿ ನಡೆಸಿದ್ದಾರೆ.
ಸುಮಾರು 300 ಎಕರೆ ಪ್ರದೇಶದಲ್ಲಿ ವಿಸ್ತರಿಸಿಕೊಂಡಿರುವ ವಿವಿ ಕ್ಯಾಂಪಸ್‌ನಲ್ಲಿ ಫೆ.16ರಿಂದ 19ರವರೆಗೆ ಗಣತಿ ನಡೆದಿದ್ದು, ಈ ಭಾರಿ 110 ಪ್ರಭೇದದ ಹಕ್ಕಿಗಳನ್ನು ದಾಖಲಿಸಲಾಗಿದೆ. ಅಪರೂಪದ ಹಕ್ಕಿಗಳಾದ ಶ್ರೀಲಂಕಾದ ಕಪ್ಪೆಬಾಯಿ,ಬಿಳಿಮಚ್ಚೆ ನತಿಂಗ, ಚಂದ್ರ ಮುಕುಟ, ಕರಿತಲೆ ಹಕ್ಕಿ, ಸಣ್ಣ ಮಿನಿವೆಟ್, ನೀಲಿ ರಾಜಹಕ್ಕಿ, ಹಳದಿ ಟಿಟ್ಟಿಬ ಹಾಗೂ ನೀಲಕಂಠ ಕ್ಯಾಂಪಸ್‌ನಲ್ಲಿ ಕಂಡು ಬಂದಿವೆ.
ವಲಸೆ ಹಕ್ಕಿಗಳಾದ ನವರಂಗ, ಕಂದು ಕೀಚುಗ, ಬೂಟುಗಾಲಿನ ಗಿಡುಗ, ಬೂದು ಕಾಜಾಣ, ಬೂದು ಉಲಿಯಕ್ಕಿ, ಹಸಿರು ಉಲಿಯಕ್ಕಿ, ಕಂದು ಎದೆಯ ನೊಣ ಹಿಡುಕ, ಕಪ್ಪುಹಕ್ಕಿ, ಬೂದು ಸಿಪಿಲೆ ಹಾಗೂ ಕಡುಗಂದು ಪಿಪಿಳೀಕ ಹಕ್ಕಿಗಳು ಕಾಣಿಸಿವೆ.