ಬಿಜೆಪಿ ಸಾಮಾಜಿಕ ಜಾಲತಾಣಿಗರ ಸಮಾವೇಶದಲ್ಲಿ ಅಮಿತ್ ಶಾ
ಉಡುಪಿ, ಫೆ.21: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಸಿದ್ಧತೆಯ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಕರ್ನಾಟಕ ಕರಾವಳಿ ಜಿಲ್ಲೆಗಳ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಇಂದು ಉಡುಪಿಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬಿಜೆಪಿಯ ಸಾಮಾಜಿಕ ಜಾಲತಾಣಿಗರ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು.
ಮುಂಬರುವ ವಿಧಾನಸಭಾ ಹಾಗೂ ಸಾರ್ವತ್ರಿಕ ಚುನಾವಣೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಹೇಗೆ ಪಕ್ಷದ ಬಲವರ್ಧನೆಗೆ ಕಾರ್ಯತತ್ವರರಾಗ ಬೇಕೆಂಬ ಬಗ್ಗೆ ಅಮಿತ್ ಶಾ ಎರಡು ಜಿಲ್ಲೆಗಳಿಂದ ಆಗಮಿಸಿದ್ದ ಸುಮಾರು 2000 ಮಂದಿ ಯುವ ಸಾಮಾಜಿಕ ಜಾಲತಾಣಿಗರಿಗೆ ಕಿವಿಮಾತುಗಳನ್ನು ಹೇಳಿದರು.
ಪತ್ರಕರ್ತರನ್ನು ಹೊರಗೆ ಕಳುಹಿಸಿ ನಗರದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದ ಮುಚ್ಚಿದ ಬಾಗಿಲಿನ ಒಳಗೆ ನಡೆದ ಈ ಸಮಾವೇಶದಲ್ಲಿ ಸಭಿಕರು ಕೇಳಿದ ಪ್ರಶ್ನೆಗಳಿಗೆ ಅಮಿತ್ ಶಾ ಉತ್ತರಿಸಿದರಲ್ಲದೇ, ಪಕ್ಷದ ಬಲವರ್ಧನೆಗೆ ತನ್ನದೇ ಆದ ಕೆಲವು ಸಲಹೆ-ಸೂಚನೆಗಳನ್ನು ಸಹ ನೀಡಿದರು ಎಂದು ತಿಳಿದು ಬಂದಿದೆ.
ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಕಳೆದ ಲೋಕಸಭಾ ಚುನಾವಣೆಯನ್ನು ಬಿಜೆಪಿ ಅಭೂತಪೂರ್ವವಾಗಿ ಗೆದ್ದಿರುವು ದರಿಂದ, ಅದೇ ರೀತಿಯಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ಹಾಗೂ ಮುಂದಿ ವರ್ಷದ ಲೋಕಸಭಾ ಚುನಾವಣೆಯಲ್ಲೂ ಗೆಲುವು ಸಾಧಿಸಬೇಕು ಎಂದವರು ನುಡಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಹ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಪಕ್ಷದ ಗೆಲುವಿಗೆ ಶ್ರಮಿಸುವಂತೆ ಕರೆ ನೀಡಿದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ 150 ಸೀಟು ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ ಎಂದರು.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ‘ಬಚ್ಛಾ’ ಎಂದು ಕರೆದ ಯಡಿಯೂರಪ್ಪ ಅವರು ರಾಜ್ಯಕ್ಕೆ ಹೆಚ್ಚು ಹೆಚ್ಚು ಪ್ರವಾಸ ಕೈಗೊಂಡರೆ ಅಷ್ಟು ಸೀಟುಗಳು ನಮಗೆ ಹೆಚ್ಚಿಗೆ ದೊರೆಯುತ್ತವೆ. ಸಿದ್ದರಾಮಯ್ಯ ದೇಶದ ಕಂಡ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಹಾಗೂ ರಾಜ್ಯದಲ್ಲಿ ಗೂಂಡಾ ಸರಕಾರ ಆಡಳಿತದಲ್ಲಿದೆ ಎಂದರು.
ಸಭೆಯಲ್ಲಿ ಮುರಳೀಧರ ರಾವ್, ಸಿ.ಟಿ.ರವಿ, ನಳಿನ್ ಕುಮಾರ್ ಕಟೀಲು, ಸುನಿಲ್ ಕುಮಾರ್, ಮಟ್ಟಾರು ರತ್ನಾಕರ ಹೆಗ್ಡೆ, ಸಂಜೀವ ಮಠಂದೂರು, ಶೋಭಾ ಕರಂದ್ಲಾಜೆ, ಬಿಜೆಪಿ ಸಾಮಾಜಿಕ ಜಾಲತಾಣದ ರಾಜ್ಯ ಪ್ರಕೋಷ್ಠದ ಸಂಚಾಲಕ ಬಾಲಾಜಿ ಶ್ರೀನಿವಾಸ್, ಜಿಲ್ಲಾ ಸಂಚಾಲಕ ಅಕ್ಷಯ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.